ಐಪಿಎಲ್ 2020: ಕೆಕೆಆರ್‌ಗೆ ಭರ್ಜರಿಯಾಗಿ ಸೋಲಿನ ರುಚಿ ತೋರಿಸಿದ ಆರ್‌ಸಿಬಿ

ಕೊಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವನ್ನು ಸಾಧಿಸಿದೆ. ಕೆಕೆಆರ್ ತಂಡವನ್ನು ಟೂರ್ನಿಯ ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಆರ್‌ಸಿಬಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆದ್ದು ಬೀಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಆರ್‌ಸಿಬಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಆರಂಭದಲ್ಲಿ ಮೊಹಮ್ಮದ್ ಸಿರಾಜ್ ವೇಗದ ದಾಳಿಗೆ ತತ್ತರಿಸಿದ ಕೆಕೆಆರ್ ಮೊದಲ ಪವರ್‌ಪ್ಲೇನಲ್ಲೇ ತನ್ನ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.ಇದರಲ್ಲಿ ಸಿರಾಜ್ ಎರಡು ಓವರ್‌ಗಳನ್ನು ಎಸೆದು ಒಂದೇ ಒಂದು ರನ್ ನೀಡದೆ ಮೂರು ವಿಕೆಟ್ ಕಿತ್ತು ಕೆಕೆಆರ್‌ನ ಸದ್ದಡಗಿಸಿದ್ದರು. ಆರಂಭದಲ್ಲಿ 3 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ಬಳಿಕ 14 ರನ್‌ಗಳಿಗೆ 4ನೇ ವಿಕೆಟ್ ಕಳೆದುಕೊಂಡಿತ್ತು.

ಆಲ್‌ಔಟ್ ಆಗದಿರುವುದೇ ಕೆಕೆಆರ್ ಸಾಧನೆ
ಸಿರಾಜ್ ಬಳಿಕ ಯುಜುವೇಂದ್ರ ಚಾಹಲ್ ತಮ್ಮ ಕೈಚಳಕವನ್ನು ತೋರಿಸಿ ಎರಡು ವಿಕೆಟ್ ಪಡೆದರು. ಕೆಕೆಆರ್‌ನ ಬ್ಯಾಟಿಂಗ್ ಪಡೆಗೆ ಸ್ವಲ್ಪವೂ ಸೊಲ್ಲೆತ್ತದಂತೆ ಮಾಡುವಲ್ಲಿ ಆರ್‌ಸಿಬಿ ಬೌಲಿಂಗ್ ಪಡೆ ಯಶಸ್ವಿಯಾಗಿತ್ತು. ಒಟ್ಟಾರೆಯಾಗಿ ನಿಗದಿತ 20 ಓವರ್‌ಗಳಲ್ಲಿ ಕೆಕೆಆರ್ ತನ್ನ 8 ವಿಕೆಟ್ ಕಳೆದುಕೊಂಡು 84 ರನ್ ಗಳಿಸಲಷ್ಟೇ ಶಕ್ತವಾಯಿತು. ಆಲೌಟ್ ಆಗದೆ ಉಳಿದಿದ್ದೇ ಕೆಕೆಆರ್‌ನ ಸಾಧನೆಯೆನಿಸಿತು.

ಆರ್‌ಸಿಬಿ ಬೌಲಿಂಗ್ ದಾಳಿ
ಇನ್ನು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಸಿರಾಜ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಇದರಲ್ಲಿ ಎರಡು ಮೇಡನ್ ಓವರ್‌ಗಳು ಕೂಡ ಸೇರಿತ್ತು. ಇನ್ನು ಚಾಹಲ್ 15 ರನ್‌ಗಳನ್ನು ನೀಡಿ 2 ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಉಳಿದಂತೆ ನವ್‌ದೀಪ್ ಸೈನಿ ಹಾಗೂ ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದುಕೊಂಡರು.

ಆರ್‌ಸಿಬಿಗೆ ಏಳನೇ ಗೆಲುವು
ಕೆಕೆಆರ್ ನೀಡಿದ ಈ ಗುರಿಯನ್ನು ಆರ್‌ಸಿಬಿ ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಯಿತು. 13.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡ ಆರ್‌ಸಿಬಿ 85 ರನ್ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಆಚರಿಸಿಕೊಂಡಿತು. ಈ ಮೂಲಕ ಟೂರ್ನಿಯಲ್ಲಿ 7ನೇ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಉತ್ತಮ ಬ್ಯಾಟಿಂಗ್
ಆರ್‌ಸಿಬಿ ತಂಡದ ಬ್ಯಾಟಿಂಗ್‌ನಲ್ಲಿ ಆರಂಭಿಕರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಮೊದಲ ವಿಕೆಟ್‌ಗೆ ಫಿಂಚ್, ಪಡಿಕ್ಕಲ್ ಜೋಡಿ 46 ರನ್‌ಗಳ ಜೊತೆಯಾಟವನ್ನು ನೀಡಿತು. ಪಡಿಕ್ಕಲ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ಫಿಂಚ್ 16 ರನ್ ಗಳಿಸಿ ಔಟಾದರು. ಬಳಿಕ ಬಂದ ಗುರುಕೀರತ್ ಹಾಗೂ ಕೊಹ್ಲಿ ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications