
ಅಬುಧಾಬಿ: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಗೆಲುವಿನ ಲಯ ಕಂಡುಕೊಂಡಿದೆ. ಶನಿವಾರ (ಅಕ್ಟೋಬರ್ 3) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ 8 ವಿಕೆಟ್ ಜಯ ಗಳಿಸಿದೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡ, ಜೋಸ್ ಬಟ್ಲರ್ 22, ರಾಬಿನ್ ಉತ್ತಪ್ಪ 17, ಮಹಿಪಾಲ್ ಲೋಮರ್ 47, ಪ್ರಿಯಮ್ ಗರ್ಗ್ 16, ರಾಹುಲ್ ತೆವಾಟಿಯಾ 24, ಜೋಫ್ರಾ ಆರ್ಚರ್ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೇವದತ್ ಪಡಿಕ್ಕಲ್ 63, ಆ್ಯರನ್ ಫಿಂಚ್ 8, ವಿರಾಟ್ ಕೊಹ್ಲಿ 72, ಎಬಿ ಡಿ ವಿಲಿಯರ್ಸ್ 12 ರನ್ ಸೇರ್ಪಡೆಯೊಂದಿಗೆ 19.1 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 158 ರನ್ ಮಾಡಿತು. ಈ ಗೆಲುವಿನ ಬಳಿಕ ಆರ್‌ಸಿಬಿ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತ್ತು.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಬೆಂಗಳೂರಿನ ಇಸುರು ಉದಾನ 2, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ 24 ರನ್‌ಗೆ 3, ನವದೀಪ್ ಸೈನಿ 1 ವಿಕೆಟ್ ಪಡೆದರೆ, ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಆರ್‌ಆರ್‌ನ ಜೋಫ್ರಾ ಆರ್ಚರ್ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು. ಯುಜುವೇಂದ್ರ ಚಾಹಲ್ ಪಂದ್ಯಶ್ರೇಷ್ಠರೆನಿಸಿದರು.