
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಲು ಕಣಕ್ಕಿಳಿದಾಗ ಅಭಿಮಾನಿಗಳು ಆಶ್ಚರ್ಯಕ್ಕೊಳಗಾದರು. ಕಾರಣ ಈ ಬಾರಿ ಮತ್ತೊಂದು ಹೊಸ ಜೋಡಿಯನ್ನು ನಾಯಕ ಸ್ಟೀವ್ ಸ್ಮಿತ್ ಕಣಕ್ಕಿಳಿಸಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್ ಇನ್ನಿಂಗ್ಸ್ ಆರಂಭಿಸಲು ಕ್ರೀಸ್‌ಗೆ ಇಳಿದಿದ್ದರು.
ರಾಜಸ್ಥಾನ್ ರಾಯಲ್ಸ್ ಈ ಬಾರಿಯ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಪಂದ್ಯವನ್ನು ಆಡುತ್ತಿದೆ. ಈ ಒಂಬತ್ತನೇ ಪಂದ್ಯದಲ್ಲಿ ಐದನೇ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಹೀಗಾಗಿ ಈ ಪ್ರಯೋಗ ಕುತೂಹಲವನ್ನು ಮುಡಿಸಿತ್ತು.
ಅತ್ಯುತ್ತಮ ಆಟಗಾರರನ್ನು ತಂಡದಲ್ಲಿ ಹೊಂದಿದ್ದರೂ ರಾಜಸ್ಥಾನ್ ರಾಯಲ್ಸ್‌ಗೆ ಗೆಲುವು ಕಠಿಣವಾಗಿದೆ. ಸರ್ವಾಂಗೀಣ ಪ್ರದರ್ಶನ ತಂಡದಿಂದ ಹೊರಹೊಮ್ಮುತ್ತಿಲ್ಲ. ಅದರಲ್ಲೂ ಅಗ್ರ ಕ್ರಮಾಂಕದಲ್ಲಿ ಆರಂಭಿಕ ಆಟಗಾರರಿಂದ ಸ್ಥಿರ ಪ್ರದರ್ಶನ ಬಾರದೆ ಇರುವುದು ಅರ್‌ಆರ್ ಪಾಲಿಗೆ ಹಾದಿ ಮತ್ತಷ್ಠು ಕಠಿಣವಾಗಿಸಿದೆ. ಹೀಗಾಗಿ ತನ್ನಲ್ಲಿರುವ ಎಲ್ಲಾ ಅವಕಾಶಗಳನ್ನು ತಂಡದ ನಾಯಕ ಸ್ಟೀವನ್ ಸ್ಮಿತ್ ಪ್ರಯೋಗಿಸುವ ಪ್ರಯತ್ನ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದರು. ಕೆಳ ಕ್ರಮಾಂಕದಲ್ಲಿ ಸಂಪೂರ್ಣವಾಗಿ ಎಡವಿದ್ದ ಉತ್ತಪ್ಪ ಆರಂಭಿಕರಾಗಿ ಕಣಕ್ಕಿಳಿದು 22 ಎಸೆತಗಳಲ್ಲಿ 41 ರನ್ ಬಾರಿಸಿದರು. ಬೆನ್ ಸ್ಟಾಕ್ಸ್ ಜೊತೆಗೆ ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟವನ್ನು ನೀಡಿದರು. ಆದರೆ ಬೆನ್ ಸ್ಟೋಕ್ಸ್ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. 19 ಎಸೆತಗಳಲ್ಲಿ ಸ್ಟೋಕ್ಸ್ ಬಾರಿಸಿದ್ದು 15 ರನ್ ಮಾತ್ರ.
ಈ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಕಣಕ್ಕಿಳಿದ ಆರಂಭಿಕ ಜೋಡಿ:
ಜೈಸ್ವಾಲ್ - ಸ್ಮಿತ್
ಬಟ್ಲರ್ - ಸ್ಮಿತ್
ಬಟ್ಲರ್ - ಜೈಸ್ವಾಲ್
ಸ್ಟೋಕ್ಸ್ - ಬಟ್ಲರ್
ಸ್ಟೋಕ್ಸ್ - ಉತ್ತಪ್ಪ