
ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 22 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಎಬಿಡಿ ಬ್ಯಾಟಿಂಗ್ ಬಲದಿಂದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ನಿಂದ ಗೆದ್ದಿತ್ತು.
ತಂಡದ ಗೆಲುವಿಗೆ ಕಾರಣರಾಗಿದ್ದ ಎಬಿ ಡಿ ವಿಲಿಯರ್ಸ್ ಅನ್ನು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮನಸಾರೆ ಶ್ಲಾಘಿಸಿದ್ದಾರೆ. ನನ್ನ ಪ್ರಕಾರ ಎಬಿಡಿ ಐಪಿಎಲ್‌ನಲ್ಲಿ ಅತೀ ಪ್ರಮುಖ ಮ್ಯಾಚ್ ವಿನ್ನರ್ ಅನ್ನಿಸಿದ್ದಾರೆ ಎಂದು ಕೊಹ್ಲಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.
'ನನ್ನ ಕಣ್ಣಿನಲ್ಲಿ ಐಪಿಎಲ್‌ನಲ್ಲಿ ಎಬಿ ಡಿ ವಿಲಿಯರ್ಸ್ ಬಲು ಪ್ರಮುಖ ಮ್ಯಾಚ್ ವಿನ್ನರ್. ಮಧ್ಯಮ ಕ್ರಮಾಂಕದಲ್ಲಿ ಆ ಮನುಷ್ಯ ಇದ್ದರೆ ಎದುರಾಳಿ ತಂಡ ಯಾವುದೇ ಇರಲಿ, ಆಟ ಇನ್ನೂ ನಮ್ಮ ಕೈಲಿದೆ ಎಂದು ನಮಗೆ ಸ್ಪಷ್ಟವಾಗಿ ಅನ್ನಿಸುತ್ತಿರುತ್ತದೆ' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ತಂಡ, ರಾಬಿನ್ ಉತ್ತಪ್ಪ 41, ಸ್ಟೀವ್ ಸ್ಮಿತ್ 57 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 177 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ 43, ಎಬಿಡಿ 55 ರನ್‌ನೊಂದಿಗೆ 179 ರನ್ ಬಾರಿಸಿ ಗೆಲುವನ್ನಾಚರಿಸಿತು.