
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕಪ್ಪು ಪಟ್ಟಿಯನ್ನು ಧರಿಸಿ ಮಂಗಳವಾರ ಮೃತಪಟ್ಟ ಅಪ್ಘಾನ್ ಕ್ರಿಕೆಟಿಗನಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ಅಪ್ಘಾನಿಸ್ಥಾನ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ನಜೀಬ್ ತಾರಕೈ ಭೀಕರ ಅಪಘಾತಕ್ಕೆ ಒಳಗಾಗಿ ಕೋಮಾ ಸ್ಥಿತಿಯಲ್ಲಿದ್ದರು. ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ರಶೀದ್ ಖಾನ್ ಅವರ ಉತ್ತಮ ಗೆಳೆಯನಾಗಿದ್ದರು ನಜೀಬ್. ಹಾಗಾಗಿ ರಶೀದ್ ಖಾನ್ ತನ್ನ ಗೆಳೆಯದ ಅಗಲಿಕೆಗೆ ಸಂತಾಪ ಸೂಚಿಸುವ ಸಲುವಾಗಿ ತಂಡದ ಸದಸ್ಯರ ಬಳಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲು ಮನವಿ ಮಾಡಿದ್ದರು. ಇದಕ್ಕೆ ಸನ್‌ರೈಸರ್ಸ್ ತಂಡದ ಎಲ್ಲಾ ಆಟಗಾರರು ಸಮ್ಮತಿಸಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದರು. ಈ ಸಂಗತಿಯನ್ನು ಕಾಮೆಂಟೇಟರ್ ಮೈಕಲ್ ಸ್ಲೇಟರ್ ವಿವರಿಸಿದ್ದಾರೆ.
ನಜೀಬ್ ತಾರಕೈ 12 ಅಂತಾರಾಷ್ಟ್ರೀಯ ಟಿ20 ಹಾಗೂ 1 ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು. 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. 2019ರ ಸೆಪ್ಟೆಂಬರ್ 15ರಂದು ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
ನಜೀಬ್ ಅವರು ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದರು. ಅದರಲ್ಲಿ ಐದು ರನ್ ಗಳಿಸಿದ್ದರು. 12 ಟಿ20 ಪಂದ್ಯಗಳಲ್ಲಿ 122.85 ಸ್ಟ್ರೈಕ್ ರೇಟ್ ಮತ್ತು 21.50 ಸರಾಸರಿಯಲ್ಲಿ 258 ರನ್ ಗಳಿಸಿದ್ದರು. ಗ್ರೇಟರ್ ನೋಯ್ಡಾದಲ್ಲಿ 2017ರಲ್ಲಿ ನಡೆದ ಪಂದ್ಯದಲ್ಲಿ 90 ರನ್ ಗಳಿಸಿದ್ದು ಅವರ ಟಿ20ಯ ಅತ್ಯಧಿಕ ಸ್ಕೋರ್ ಆಗಿದೆ. ಈ ಪಂದ್ಯದ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.