ಐಪಿಎಲ್: ಪ್ರಮುಖ 5 ಫ್ಲಾಫ್ ಶೋವರ್‌ಗಳ ಹೆಸರಿಸಿ ಟೀಕಿಸಿದ ಸೆಹ್ವಾಗ್!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಮುಗಿದಾಗಿದೆ. ಮುಂಬೈ ಇಂಡಿಯನ್ಸ್ ಸತತ ಎರಡನೇ ಬಾರಿ ಚಾಂಪಿಯನ್ಸ್ ಆಗಿ ಮಿನುಗಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ನಲ್ಲಿ ಎಡವಿ ಚೊಚ್ಚಲ ಟ್ರೋಫಿ ಗೆಲುವಿನ ಕನಸನ್ನು ಕೈ ಚೆಲ್ಲಿದೆ. ಈ ಬಾರಿಯ ಸೀಸನ್‌ನಲ್ಲಿ ಪ್ರಮುಖ ಆಟಗಾರರೆನಿಸಿದ್ದ ಒಂದಿಷ್ಟು ಮಂದಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ನಿರೀಕ್ಷಿತ ಪ್ರದರ್ಶನ ಅನ್ನುವುದಕ್ಕಿಂತ ಫ್ಲಾಫ್ ಶೋಗಳು ಪ್ರಮುಖ ಆಟಗಾರರಿಂದಲೇ ಬಂದಿತ್ತು.
2020ರ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ನೀಡಿದ ವಿಶ್ವ ಖ್ಯಾತಿಯ ಪ್ರಮುಖ ಆಟಗಾರರನ್ನು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೆಸರಿಸಿದ್ದಾರಲ್ಲದೆ ಅವರೆಲ್ಲರನ್ನೂ ಕಟುವಾಗಿ ಟೀಕಿಸಿದ್ದಾರೆ. ಸೆಹ್ವಾಗ್ ಪಟ್ಟಿಯಲ್ಲಿ ವಿದೇಶಿ ಆಟಗಾರರೇ ಇರುವುದು ವಿಶೇಷ.
ಫೇಸ್ಬುಕ್ ವಿಡಿಯೋದಲ್ಲಿ ವೀರೇಂದ್ರ ಸೆಹ್ವಾಗ್ ಹೆಸರಿಸಿ ಟೀಕಿಸಿರುವ ಪ್ರಮುಖ ವಿದೇಶಿ ಆಟಗಾರರ ಪಟ್ಟಿ ಹೀಗಿದೆ ನೋಡಿ..

1. ಆ್ಯರನ್ ಫಿಂಚ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಈ ಬಾರಿ ನೀರಸ ಬ್ಯಾಟಿಂಗ್ ನೀಡಿದ್ದರು. ಬಹುಶಃ ಫಿಂಚ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರೆ ಆರ್‌ಸಿಬಿ ಇನ್ನೂ ಒಂದು ಹೆಜ್ಜೆ ಮುಂದಿಡುತ್ತಿತ್ತೊ ಏನೋ. 'ಬೆಂಗಳೂರು ತಂಡದ ಶಾಪ ಆ್ಯರನ್ ಫಿಂಚ್‌ಗೆ ತುಂಬಾ ಪರಿಣಾಮ ಬೀರಿದಂತೆ ಕಂಡಿತು. ಈ ಸೀಸನ್‌ನಲ್ಲಿ ಫಿಂಚ್ ಬ್ಯಾಟಿಂಗ್ ಎಂಜಿನ್ ಸಂಪೂರ್ಣ ಸ್ಥಗಿತಗೊಂಡಿತ್ತು,' ಎಂದು ಸೆಹ್ವಾಗ್ ಹೇಳಿದ್ದಾರೆ.

2. ಆ್ಯಂಡ್ರೆ ರಸೆಲ್
ಕೋಲ್ಕತ್ತಾ ನೈಟ್ ರೈಡರ್ಸ್‌ನ ಬೀಸುಗೈ ದಾಂಡಿಗ ಆ್ಯಂಡ್ರೆ ರಸೆಲ್ ಅವರನ್ನು ಸೆಹ್ವಾಗ್ ಫ್ಲಾಪ್ ಶೋವರ್‌ಗಳ ಪಟ್ಟಿಯಲ್ಲಿ ಹೆಸರಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಅಪಾಯಕಾರಿ ಆಲ್ ರೌಂಡರ್ ರಸೆಲ್ ಅವರನ್ನು ಹೆಸರಿಸಿರುವ ಸೆಹ್ವಾಗ್, 'ಈ ಸೀಸನ್‌ನಲ್ಲಿ ರಸೆಲ್ ತೋಳ್ಬಲ ಉದಾಸೀನ ತೋರಿತು. ಪ್ರತೀ ಇನ್ನಿಂಗ್ಸ್‌ನಲ್ಲೂ ಆಸೆ ಮೂಡಿಸುತ್ತಿದ್ದ ರಸೆಲ್ ಮರುಕ್ಷಣ ಮಲಗಿಬಿಡುತ್ತಿದ್ದರು,' ಎಂದು ಟೀಕಿಸಿದ್ದಾರೆ.

3. ಶೇನ್ ವಾಟ್ಸನ್
ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಈ ಬಾರಿ ಕಳಪೆ ಪ್ರದರ್ಶನ ನೀಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡಿದ್ದ ವಾಟ್ಸನ್ ಐಪಿಎಲ್ ಕೊನೆಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದರು. 'ಡೀಸೆಲ್ ಇಂಜಿನ್ ಅನ್ನಿಸಿದ್ದ ಶೇನ್ ವಾಟ್ಸನ್ ಅವರಲ್ಲಿ ಸಿಎಸ್‌ಕೆ ಆಶಾಭಾವನೆ ಹೊಂದಿತ್ತು. ಆದರೆ ಅವರು ಸೀಸನ್ ಅನ್ನು ಉತ್ತಮ ರೀತಿಯಲ್ಲಿ ಆರಂಭಿಸಲಿಲ್ಲ,' ಎಂದು ವೀರೂ ಹೇಳಿದ್ದಾರೆ.

4. ಗ್ಲೆನ್ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಈ ಸೀಸನ್‌ನಲ್ಲಿ ನಿರಾಸೆಯ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮ್ಯಾಕ್ಸ್‌ವೆಲ್ ಮಿಂಚು ಕಾಣಸಿಗಲಿಲ್ಲ. '10 ಕೋಟಿಯ ಚಿಯರ್ ಲೀಡರ್ ಪಂಜಾಬ್‌ಗೆ ದುಬಾರಿಯೆನಿಸಿದರು. ಅವರ ಐಪಿಎಲ್ ಪ್ರದರ್ಶನ ಕಳೆದ ಕೆಲ ವರ್ಷಗಳಿಂದ ನೀರಸ ಎನಿಸುತ್ತಿದೆ,' ಎಂದು ಸೆಹ್ವಾಗ್ ನುಡಿದಿದ್ದಾರೆ.

5. ಡೇಲ್ ಸ್ಟೇನ್
ದಕ್ಷಿಣ ಆಫ್ರಿಕಾ ಮಾರಕ ವೇಗಿ ಡೇಲ್ ಸ್ಟೇನ್ ಕೂಡ ವೀರೇಂದ್ರ ಸೆಹ್ವಾಗ್ ಪಟ್ಟಿಯಲ್ಲಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸ್ಟೇನ್‌ಗೆ ಕೊಹ್ಲಿ ಹೆಚ್ಚು ಅವಕಾಶ ನೀಡಿರಲಿಲ್ಲ. ಒಂದು ಪಂದ್ಯದಲ್ಲಿ ಸ್ಟೇನ್ ಹೊಡೆಸಿಕೊಂಡ ಬಳಿಕ ಅವರನ್ನು ಆರ್‌ಸಿಬಿ ಬೆಂಜ್ ಕಾಯಿಸಲು ಬಿಟ್ಟಿತ್ತು. ಸ್ಟೇನ್ ಬಗ್ಗೆ ಮಾತನಾಡಿರುವ ಸೆಹ್ವಾಗ್, 'ಸ್ಟೇನ್ ಗನ್‌ನಿಂದ ಈ ಸಾರಿ ಬುಲೆಟ್ ಸಿಡಿಯಲಿಲ್ಲ. ಸ್ಟೇನ್ ಗನ್ ಈ ಬಾರಿ ಮನೆಯ ಪೈಪ್ ಗನ್‌ನಂತಾಗಿತ್ತು,' ಎಂದು ಟೀಕಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications