
ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್
ವಿಶ್ವದಲ್ಲಿ ಅತ್ಯಂತ ಪರಿಣಾಮಕಾರಿ ವೇಗಿಗಳಲ್ಲಿ ಒಬ್ಬರು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್. ಆದರೆ ಈ ವೇಗಿ 2015ರ ಐಪಿಎಲ್ ಆವೃತ್ತಿಯಿಂದ ಶ್ರಿಮಂತ ಕ್ರಿಕೆಟ್ ಲೀಗ್‌ನಿಂದ ದೂರವುಳಿದಿದ್ದಾರೆ. ಗಾಯದ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳನ್ನು ನೀಡಿ ಪ್ರತಿಬಾರಿಯೂ ಸ್ಟಾರ್ಕ್ ಐಪಿಎಲ್‌ನಿಂದ ದೂರವುಳಿದಿದ್ದಾರೆ. ಈ ಬಾರಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿ ಶೇಫಿಲ್ಡ್ ಶೀಲ್ಡ್‌ನಲ್ಲಿ ಪಾಲ್ಗೊಳ್ಳುವ ಕಾರಣಕ್ಕೆ ಸ್ಟಾರ್ಕ್ ಐಪಿಎಲ್‌ನಿಂದ ಹಿಂದಕ್ಕೆ ಸರಿದಿದ್ದಾರೆ.

ಭಾರತದ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್
ಈ ಬಾರಿಯ ಐಪಿಎಲ್‌ಗೆ ಕೆಲವೇ ದಿನಗಳು ಇರುವಾಗ ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ಐಪಿಎಲ್‌ನಿಂದ ಹೊರಗುಳಿಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇಂಗ್ಲೆಂಡ್ ವಿರುದ್ಧಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಭುಜದ ನೋವಿಗೆ ತುತ್ತಾದರು. ಹೀಗಾಗಿ ಶ್ರೇಯಸ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದು ಮುಂದಿನ ನಾಲ್ಕೈದು ತಿಂಗಳು ಸಂಪೂರ್ಣವಾಗಿ ವಿಶ್ರಾಂತಿಯನ್ನು ಪಡೆಯಬೇಕಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ನಾಯಕನ ಸೇವೆಯನ್ನೇ ಕಳೆದುಕೊಂಡಿದ್ದು ಹೊಸ ನಾಯಕನನ್ನು ಅದು ಆಯ್ಕೆ ಮಾಡಿಕೊಳ್ಳಬೇಕಿದೆ.

ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್
ಕಳೆದ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದ ಡೇಲ್ ಸ್ಟೇನ್ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹಿಂದಕ್ಕೆ ಸರಿದ ಮೊದಲ ಆಟಗಾರನಾಗಿದ್ದರು. ಟ್ವಿಟ್ಟರ್‌ನಲ್ಲಿ ಅವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಮಾಹಿತಿಯನ್ನು ನೀಡಿದ್ದರು. ಅಂದ ಮಾತ್ರಕ್ಕೆ ಡೇನ್ ಸ್ಟೇನ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ ಎಂದು ಅರ್ಥವಲ್ಲ. ಬಳಿಕ ಡೇಲ್ ಸ್ಟೇನ್ ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಐಪಿಎಲ್‌ನಲ್ಲಿ ಹಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು.

ಇಂಗ್ಲೆಂಡ್ ವೇಗಿ ಮಾರ್ಕ್‌ವುಡ್
ಇಂಗ್ಲೆಂಡ್ ತಂಡದ ವೇಗಿ ಮಾರ್ಕ್‌ವುಡ್ ಈವರೆಗೆ ಕೇವಲ ಒಂದು ಆವೃತ್ತಿಯಲ್ಲಿ ಮಾತ್ರವೇ ಆಡಿದ್ದಾರೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ಮಾರ್ಕ್‌ವುಡ್ ಬಳಿಕ ಈ ಲೀಗ್‌ನಿಂದ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಭಾರತದ ವಿರುದ್ಧದ ಟಿ20 ಸರಣಿಯಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿದ ಮಾರ್ಕ್‌ವುಡ್ ಈ ಬಾರಿಯ ಹರಾಜಿಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು ಅಂತಿಮ ಪಟ್ಟಿಯಲ್ಲಿಯೂ ಹೆಸರು ಉಳಿದಿಕೊಂಡಿದ್ದರು. ಆದರೆ ಹರಾಜಿಗೆ ಕೆಲವೇ ಗಂಟೆಗಳು ಇರುವಾಗ ಹರಾಜಿನಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡರು ಮಾರ್ಕ್‌ವುಡ್. ಐಪಿಎಲ್ ನಡೆಯುವ ಸಂದರ್ಭವನ್ನು ಕುಟುಂಬದೊಂದಿಗೆ ಕಳೆಯಲು ನಿರ್ಧರಿಸಿರುವುದಾಗಿ ಮಾರ್ಕ್‌ವುಡ್ ಹೇಳಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್
ಪ್ರಸಕ್ತ ಕಾಲದ ಕ್ರಿಕೆಟ್‌ನ ಅತ್ಯುತ್ತಮ ಆಟಗಾರನಲ್ಲಿ ಓರ್ವ ಎನಿಸಿಕೊಂಡಿರುವ ಜೋ ರೂಟ್ ಐಪಿಎಲ್‌ನಲ್ಲಿ ಈವರೆಗೆ ಒಂದು ಬಾರಿಯೂ ಆಡಲು ಇಳಿದಿಲ್ಲ. ಪ್ರತಿ ಬಾರಿಯ ಐಪಿಎಲ್‌ಗೂ ಮುನ್ನ ಜೋ ರೂಟ್ ಐಪಿಎಲ್‌ನಲ್ಲಿ ಆಡಬಹುದೇ ಎಂಬ ಕುತೂಹಲವನ್ನು ಅಭಿಮಾನಿಗಳು ಹೊಂದಿರುತ್ತಾರೆ. ಆದರೆ ಅಭಿಮಾನಿಗಳಿಗೆ ಜೋ ರೂಟ್ ಈವರೆಗೂ ನಿರಾಸೆಯನ್ನೇ ಮಾಡಿದ್ದಾರೆ. ಈ ಬಾರಿ ಹೆಚ್ಚಿನ ಟೆಸ್ಟ್ ಪಂದ್ಯಗಳು ನಡೆಯುತ್ತಿರುವ ಕಾರಣ ಐಪಿಎಲ್‌ಗಾಗಿ ಸಮಯವನ್ನು ನೀಡಲು ಇದು ಸರಿಯಾದ ಸಮಯವೆನಿಸುತ್ತಿಲ್ಲ ಎಂದು ಈ ಬಾರಿಯ ಐಪಿಎಲ್‌ನಿಂದ ದೂರವುಳಿಯಲು ಜೋ ರೂಟ್ ಕಾರಣವನ್ನು ನೀಡಿದ್ದಾರೆ.


Click it and Unblock the Notifications












