
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಅಭ್ಯಾಸ ನಡೆಸುತ್ತಿದೆ. ಏಪ್ರಿಲ್ 6ರ ಮಂಗಳವಾರ ವಿರಾಟ್ ಕೊಹ್ಲಿ ಪಡೆ ಎರಡನೇ ಅಭ್ಯಾಸ ಪಂದ್ಯವಾಡಿದೆ. ಎರಡನೇ ಅಭ್ಯಾಸ ಪಂದ್ಯ ಹೈ ಸ್ಕೋರಿಂಗ್ ಪಂದ್ಯವಾಗಿತ್ತು ಅನ್ನೋದು ವಿಶೇಷ.
ಏಪ್ರಿಲ್ 9ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಹೀಗಾಗಿ ಆರ್‌ಸಿಬಿ ಭರ್ಜರಿ ತಯಾರಿ ನಡೆಸುತ್ತಿದೆ. ಮಂಗಳವಾರದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದು ಕಂಡುಬಂತು.
ಮಂಗಳವಾರ ಆರ್‌ಸಿಬಿ ನಡೆಸಿದ ಹೈ ಸ್ಕೋರಿಂಗ್ ಪಂದ್ಯದ ವಿಡಿಯೋವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಎಬಿ ಡಿವಿಲಿಯರ್ಸ್, ವೇಗಿ ನವದೀಪ್ ಸೈನಿ ಸೇರಿದಂತೆ ಆರ್‌ಸಿಬಿ ಪ್ರಮುಖ ಆಟಗಾರರು ಮೈದಾನಕ್ಕಿಳಿದು ಅಭ್ಯಾಸ ನಡೆಸಿರುವ ಚಿತ್ರಣ ವಿಡಿಯೋದಲ್ಲಿ.
ಏಪ್ರಿಲ್ 1ರಂದು ಆರ್‌ಸಿಬಿ ತಂಡ ಸೇರಿಕೊಂಡಿರುವ ನಾಯಕ ವಿರಾಟ್ ಕೊಹ್ಲಿಯ ಕಡ್ಡಾಯ ಕ್ವಾರಂಟೈನ್ ಏಪ್ರಿಲ್ 7ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಈ ವಿಡಿಯೋದಲ್ಲಿ ಕೊಹ್ಲಿ ಕಾಣಿಸಿಕೊಂಡಿಲ್ಲ. ಉದ್ಘಾಟನಾ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 7.30 pmಗೆ ಆರಂಭಗೊಳ್ಳಲಿದೆ.