ಉಳಿದ 31 ಐಪಿಎಲ್ ಪಂದ್ಯಗಳನ್ನು ಈ ತಿಂಗಳುಗಳಲ್ಲಿ ನಡೆಸಲು ಬಿಸಿಸಿಐ ಯೋಜನೆ

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವುದೇ ಅಡಚಣೆಗಳಿಲ್ಲದೆ 29 ಪಂದ್ಯಗಳನ್ನು ಯಶಸ್ವಿಯಾಗಿ ಪೂರೈಸಿತು. ಆದರೆ ಐಪಿಎಲ್ ಬಯೋಬಬಲ್ ಒಳಗಡೆ ಕೊರೊನಾ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ತರಬೇತುದಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು.
ಪ್ರಸ್ತುತ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಬೆನ್ನಲ್ಲೇ ಯಾವ ತಿಂಗಳಿನಲ್ಲಿ ಮತ್ತು ಯಾವ ದೇಶದಲ್ಲಿ ಉಳಿದಿರುವ ಐಪಿಎಲ್ ಪಂದ್ಯಗಳನ್ನು ಮುಂದುವರಿಸಲಾಗುತ್ತದೆ ಎಂಬ ಚರ್ಚೆಗಳು ಆರಂಭವಾದವು. ಉಳಿದ ಐಪಿಎಲ್ ಪಂದ್ಯಗಳನ್ನು ನಡೆಸಲು ಯುಎಇ, ಇಂಗ್ಲೆಂಡ್ ಮತ್ತು ಶ್ರೀಲಂಕಾ ದೇಶಗಳ ಹೆಸರುಗಳು ಹೆಚ್ಚಾಗಿ ಕೇಳಿಬಂದವು. ಆದರೆ ಬಿಸಿಸಿಐನಿಂದ ಮಾತ್ರ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.
ಆದರೆ ಇದೀಗ ಮೇ 29ರಂದು ವಿಶೇಷ ಸಭೆಯನ್ನು ಕೈಗೊಳ್ಳಲಿರುವ ಬಿಸಿಸಿಐ ಪ್ರಸ್ತುತ ಐಪಿಎಲ್ ಟೂರ್ನಿಯ ಉಳಿದ 31 ಪಂದ್ಯಗಳನ್ನು ಯಾವ ದಿನಾಂಕಗಳಲ್ಲಿ ಮತ್ತು ಯಾವ ದೇಶದಲ್ಲಿ ನಡೆಸಬೇಕು ಎಂಬುದನ್ನು ತೀರ್ಮಾನಿಸಲಿದೆ ಎನ್ನಲಾಗುತ್ತಿದೆ. ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಯುಎಇಯಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆ ಸಮಯದಲ್ಲಿ ಟೀಮ್ ಇಂಡಿಯಾ ಯಾವುದೇ ಸರಣಿಗಳನ್ನು ಹೊಂದಿಲ್ಲದ ಕಾರಣ ಬಿಸಿಸಿಐ ಈ ಸಮಯದಲ್ಲಿ ಉಳಿದಿರುವ ಐಪಿಎಲ್ ಪಂದ್ಯಗಳನ್ನು ಮುಂದುವರೆಸಲಿದೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ವಿಶೇಷ ಸಭೆಯ ನಂತರ ಇದೇ ದಿನಾಂಕದಲ್ಲಿ ಉಳಿದ ಐಪಿಎಲ್ ಟೂರ್ನಿಯನ್ನು ನಡೆಸುವುದಾಗಿ ತಿಳಿಸುತ್ತಾ ಎಂಬುದನ್ನು ಕಾದು ನೋಡಬೇಕು.

ಮೇ 29ರಂದು ಅಂತಿಮ ತೀರ್ಮಾನ
ಬಿಸಿಸಿಐ ಮೇ 29 ರಂದು ವಿಶೇಷ ಸಾಮಾನ್ಯ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಐಪಿಎಲ್ ಟೂರ್ನಿಯನ್ನು ಎಲ್ಲಿ ಮತ್ತು ಯಾವಾಗ ಮುಂದುವರಿಸಬೇಕು ಎಂಬ ಕುರಿತು ಚರ್ಚೆಯನ್ನು ನಡೆಸಲಿದ್ದಾರೆ. ಈ ಚರ್ಚೆಗಳ ಬಳಿಕ ಪ್ರಸ್ತುತ ಐಪಿಎಲ್ ಟೂರ್ನಿ ಎಲ್ಲಿ ಮತ್ತು ಯಾವಾಗ ಮುಂದುವರಿಯಲಿದೆ ಎಂಬುದನ್ನು ಅಧಿಕೃತವಾಗಿ ಬಿಸಿಸಿಐ ತಿಳಿಸಲಿದೆ.

ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಬೇಗ ಮುಗಿಸುವಂತೆ ಮನವಿ
ಸೆಪ್ಟೆಂಬರ್ 15ರಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂದುವರಿಸುವ ಯೋಜನೆ ಇರುವ ಕಾರಣ ಆಗಸ್ಟ್ 04ರಿಂದ ಶುರುವಾಗಲಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಸೆಪ್ಟೆಂಬರ್ 14ರೊಳಗೆ ಮುಗಿಸುವಂತೆ ಇಸಿಬಿಗೆ ಬಿಸಿಸಿಐ ಮನವಿ ಮಾಡಲಿದೆ ಎನ್ನಲಾಗುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದ ನಡುವೆ ಇದೇ 9 ದಿನಗಳ ಅಂತರ!
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 5 ಟೆಸ್ಟ್ ಪಂದ್ಯಗಳ ಸರಣಿಯ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳ ನಡುವೆ 9 ದಿನಗಳ ಅಂತರವಿದ್ದು ಈ ಅಂತರವನ್ನು 3 ಅಥವಾ 4 ದಿನಗಳಿಗೆ ಇಳಿಸುವುದರ ಮೂಲಕ ಸರಣಿಯನ್ನು ಬೇಗ ಮುಗಿಸುವಂತೆ ಇಸಿಬಿಗೆ ಬಿಸಿಸಿಐ ಮನವಿ ಮಾಡುವ ಸಾಧ್ಯತೆಯಿದೆ.

ಯುಎಇ ಸೇಫ್
ಪ್ರಸ್ತುತ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಯುಎಇಯಲ್ಲಿ ಐಪಿಎಲ್ ಟೂರ್ನಿಯನ್ನು ಮುಂದುವರಿಸುವುದು ಎನ್ನಲಾಗುತ್ತಿದ್ದು, ಯುಎಇಯಲ್ಲಿ ಕೊರೊನಾಸೋಂಕಿನ ಹಾವಳಿ ಇಲ್ಲದೆ ಇರುವ ಕಾರಣ ಐಪಿಎಲ್ ಟೂರ್ನಿ ಯಾವುದೇ ತೊಂದರೆಗಳಿಲ್ಲದೆ ನಡೆಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ಐಪಿಎಲ್ ಟೂರ್ನಿಯನ್ನು ಸಹ ಯುಎಇಯಲ್ಲಿಯೇ ಯಾವುದೇ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications