
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹರಾಜಿಗೆ ಸಿದ್ಧವಾಗಿರುವ ಆಟಗಾರರ ಅಂತಿಮ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫೆ.11ರಂದು ಪ್ರಕಟಿಸಿದೆ.
ಈ ಪೈಕಿ ವೆಸ್ಟ್ ಇಂಡೀಸ್ (56), ಆಸ್ಟ್ರೇಲಿಯಾ (42) ಹಾಗೂ ದಕ್ಷಿಣ ಆಫ್ರಿಕಾ ( 38) ಆಟಗಾರರಲ್ಲದೆ, ಸಹಭಾಗಿತ್ವ ದೇಶಗಳ 27 ಕ್ರಿಕೆಟರ್ಸ್, 743 ಭಾರತೀಯರು ಸೇರಿದಂತೆ 863 ಅನ್ ಕ್ಯಾಪ್ಡ್ ಕ್ರಿಕೆಟರ್ಸ್ ಹಾಗೂ 68 ವಿದೇಶಿ ಆಟಗಾರರು ಸೇರಿದಂತೆ ಸುಮಾರು 1114 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆಯಲ್ಲಿ ಕಡಿತಗೊಳಿಸಿ 292ಕ್ಕೆ ಇಳಿಸಲಾಗಿದೆ.
ಫೆಬ್ರವರಿ 18ರಂದು ಮಧ್ಯಾಹ್ನ 3 ಗಂಟೆಗೆ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿವೆ.
2 ಕೋಟಿ ರು ಮೂಲ ಬೆಲೆಯಲ್ಲಿ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾನ್ ಪ್ಲಂಕೆಟ್, ಜಾಸನ್ ರಾಯ್ ಹಾಗೂ ಮಾರ್ಕ್ ವುಡ್.
1.5 ಕೋಟಿ ರು ಮೂಲ ಬೆಲೆಯಲ್ಲಿ 12 ಆಟಗಾರರಿದ್ದಾರೆ.1 ಕೋಟಿ ರು ಮೂಲ ಬೆಲೆಯಲ್ಲಿ ಹನುಮ ವಿಹಾರಿ, ಉಮೇಶ್ ಯಾದವ್ ಸೇರಿದಂತೆ 11 ಆಟಗಾರರಿದ್ದಾರೆ.
ಒಟ್ಟಾರೆ, 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ 3 ಅಸೋಸಿಯೇಟೆಡ್ ದೇಶಗಳ ಆಟಗಾರರು ಹರಾಜಿಗೆ ಸಿದ್ಧವಾಗಿದ್ದಾರೆ.
ಹರಾಜು ಪಟ್ಟಿಯಲ್ಲಿರುವ ಎಸ್ ಶ್ರೀಶಾಂತ್, ಅರ್ಜುನ್ ತೆಂಡೂಲ್ಕರ್ ಅವರ ಜೊತೆಗೆ ಹಿರಿಯ ಆಟಗಾರರೊಬ್ಬರು ಗಮನ ಸೆಳೆಯುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಅವರ ಪುತ್ರ ನಯನ್ ದೋಶಿ ಅವರು ಐಪಿಎಲ್ 2021ರ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇದೇ ರೀತಿ 16 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಅಫ್ಘಾನಿಸ್ತಾನದ ನೂರ್ ಅಹ್ಮದ್ ಲಖನ್ ವಾಲ್ ಅತಿ ಕಿರಿಯ ಆಟಗಾರರಾಗಿದ್ದಾರೆ.ನಯನ್ ಹಾಗೂ ಲಖನ್ ವಾಲ್ ಇಬ್ಬರಿಗೂ 20 ಲಕ್ಷ ಮೂಲ ಬೆಲೆ ನಿಗದಿಪಡಿಸಲಾಗಿದೆ. ಪೂರ್ಣ ಪಟ್ಟಿ ಐಪಿಎಲ್ ಟಿ20 ತಾಣದಲ್ಲಿ ಲಭ್ಯವಿದೆ