ಕೊನೆಯ ರನ್ ಮೋಸ ಮಾಡಿ ಚೆನ್ನೈ ವಿರುದ್ಧ ಗೆದ್ರಾ ಮುಂಬೈ ಇಂಡಿಯನ್ಸ್?

ಶನಿವಾರ ( ಮೇ 1 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಅತಿ ರೋಚಕ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ ಮತ್ತು ಅಂಬಾಟಿ ರಾಯುಡು ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ 219 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಯಾರೂ ಊಹಿಸಿರದ ರೀತಿ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು.
ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಕೀರನ್ ಪೊಲಾರ್ಡ್ 34 ಎಸೆತಗಳಲ್ಲಿ 87 ರನ್ ಬಾರಿಸಿ ಮುಂಬೈ ಇಂಡಿಯನ್ಸ್ ತಂಡವನ್ನು ಗೆದ್ದು ಬೀಗುವಂತೆ ಮಾಡಿದರು. ಮುಂಬೈ ಮತ್ತು ಚೆನ್ನೈ ನಡುವಿನ ಈ ರೋಚಕ ಪಂದ್ಯ ಮುಗಿದ ನಂತರ ಇದೀಗ ಪಂದ್ಯದ ಕುರಿತು ವಿವಾದವೊಂದು ತಲೆಎತ್ತಿದೆ. ಹೌದು ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಳೆ ಕೊನೆಯ 2 ರನ್‌ಗಳ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕೊನೆಯ ಓವರ್‌ನ್ನು ಲುಂಗಿ ಎನ್ಗಿಡಿ ಎಸೆದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 2 ರನ್‌ಗಳ ಅಗತ್ಯತೆಯಿತ್ತು, ಈ ವೇಳೆ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದರೆ, ಧವಳ್ ಕುಲಕರ್ಣಿ ನಾನ್-ಸ್ಟ್ರೈಕರ್ ತುದಿಯಲ್ಲಿದ್ದರು. ನಂತರ ಪೊಲಾರ್ಡ್ ಮತ್ತು ಧವಳ್ ಕುಲಕರ್ಣಿ ಆ ಕೊನೆಯ ಎಸೆತದಲ್ಲಿ ಯಶಸ್ವಿಯಾಗಿ 2 ರನ್‌ಗಳನ್ನು ಓಡಿ ಪೂರೈಸುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿತು. ಆದರೆ ಲುಂಗಿ ಎನ್ಗಿಡಿ ಕೊನೆಯ ಎಸೆತವನ್ನು ಎಸೆಯುವ ಮುನ್ನವೇ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಧವಳ್ ಕುಲಕರ್ಣಿ ಕ್ರೀಸ್ ಬಿಟ್ಟು ಒಂದೆರಡು ಹೆಜ್ಜೆ ಮುಂದೆ ಹೋಗಿದ್ದಾರೆ. ಧವಲ್ ಕುಲಕರ್ಣಿ ಈ ರೀತಿ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಈ ವಿಷಯದ ಕುರಿತಾಗಿ ಮುಂಬೈ ಇಂಡಿಯನ್ಸ್ ತಂಡದ ಕಾಲೆಳೆದಿದ್ದಾರೆ.
'ಕೊನೆಯ ಎಸೆತದಲ್ಲಿ 2 ರನ್ ಬೇಕಾಗಿದ್ದಾಗ ಧವಳ್ ಕುಲಕರ್ಣಿ ಅವರು ಬೌಲರ್ ಬಾಲನ್ನು ಎಸೆಯುವ ಮೊದಲೇ ಕ್ರೀಸ್ ಬಿಟ್ಟು ಹೋಗುವುದರ ಮೂಲಕ ಅನುಕೂಲವನ್ನು ಪಡೆದುಕೊಂಡಿದ್ದಾರೆ, ಕ್ರೀಡಾಪಟುತ್ವ ಎಂದರೆ ಇದೇನಾ?' ಎಂದು ಬ್ರಾಡ್ ಹಾಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಶ್ನೆ ಹಾಕಿದ್ದಾರೆ. ಸದ್ಯ ಧವಳ್ ಕುಲಕರ್ಣಿಯವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೋಸದ ರನ್ ಕದ್ದು ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಗಳಿಸಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications