ಐಪಿಎಲ್‌ಗೆ ಶ್ರೇಯಸ್ ಐಯ್ಯರ್ ಅಲಭ್ಯ ಸಾಧ್ಯತೆ: ಈ ನಾಲ್ವರಲ್ಲಿ ಡೆಲ್ಲಿ ನಾಯಕತ್ವ ಯಾರಿಗೆ!

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ಭುಜದ ನೋವಿಗೆ ಒಳಗಾಗಿ ಪಂದ್ಯದಿಂದ ಹೊರಗುಳಿದಿದ್ದರು. ಈಗ ಅವರ ಭುಜದ ಮೂಳೆ ಸ್ಥಳಾಂತರವಾಗಿರುವುದು ಪತ್ತೆಯಾಗಿದೆ. ಹೀಗಾಗಿ ಏಕದಿನ ಸರಣಿಯಿಂದ ಅವರು ಹೊರಗುಳಿದಿದ್ದಾರೆ. ಈಗ ಶ್ರೇಯಸ್ ಐಯ್ಯರ್ ಮುಂಬರುವ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಕೂಡ ಅನುಮಾನವೆನಿಸಿದೆ. ಕನಿಷ್ಟ ಮೊದಲಾರ್ಧವನ್ನಾದರೂ ಐಯ್ಯರ್ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ ಶ್ರೇಯಸ್ ಐಯ್ಯರ್ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ನಾಯಕತ್ವ ಹಾಗೂ ತಮ್ಮ ಬ್ಯಾಟಿಂಗ್‌ಅನ್ನು ಸಮರ್ಥವಾಗಿ ಹೊಂದಾಣಿಕೆ ಮಾಡುವಲ್ಲಿಯೂ ಐಯ್ಯರ್ ಯಶಸ್ವಿಯಾಗಿದ್ದರು. ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶ್ರೇಯಸ್ ಐಯ್ಯರ್ ಸೇವೆಯಿಂದ ವಂಚಿತಗೊಳ್ಳುವ ಸಂಭವವಿದೆ. ಶ್ರೇಯಸ್ ಐಯ್ಯರ್ ಹೆಚ್ಚಿನ ವಿಶ್ರಾಂತಿ ಪಡೆಯುವ ಅಗತ್ಯಗಳು ಇರಬಹುದು ಎನ್ನಲಾಗುತ್ತದೆ.
ಈ ಬಾರಿ ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗದಿದ್ದರೆ ತಂಡವನ್ನು ಮುನ್ನಡೆಸುವ ಆಟಗಾರ ಯಾರು ಎಂಬುದು ಪ್ರಶ್ನೆಯಾಗಿದೆ.

4. ಅಜಿಂಕ್ಯ ರಹಾನೆ
ಅನುಭವಿ ಆಟಗಾರ ಅಜಿಂಕ್ಯ ರಹಾನೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲು ಇರುವ ಒಂದು ಉತ್ತಮ ಆಯ್ಕೆಯಾಗಿದೆ. ಮುಂಬೈ ಮೂಲದ ಈ ಆಟಗಾರನಿಗೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಇದರ ಜೊತೆಗೆ ಭಾರತೀಯ ಟೆಸ್ಟ್ ತಂಡದ ಉಪನಾಯಕನೂ ಆಗಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯುವ ಆಟಗಾರರನ್ನು ಹೊಮದಿದ್ದರೂ ತನ್ನ ವಿಭಿನ್ನವಾದ ತಂತ್ರಗಾರಿಕೆಯಿಂದಾಗಿ 2-1 ಅಂತರದಿಂದ ಆಸಿಸ್ ತಂಡವನ್ನು ಮಣಿಸಲು ಕಾರಣರಾಗಿದ್ದರು. ರಾಜಸ್ಥಾನ ರಾಯಲ್ಸ್ ಹಾಗೂ ಪುಣೆ ಸೂಪರ್‌ಜೈಂಟ್ಸ್ ತಂಡಗಳನ್ನು 25 ಪಂದ್ಯಗಳನ್ನು ಮುನ್ನಡೆಸಿದ್ದಾರೆ.

3. ಆರ್ ಅಶ್ವಿನ್
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲು ಇರುವ ಮತ್ತೊಂದು ಕುತೂಹಲಕಾರಿ ಆಯ್ಕೆ ಆರ್ ಅಶ್ವಿನ್. ಐಪಿಎಲ್ ನಾಯಕತ್ವದ ವಿಚಾರವಾಗಿ ಆರ್ ಅಶ್ವಿನ್ ಅಜಿಂಕ್ಯ ರಹಾನೆಗಿಂತಲೂ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಬುದ್ದಿವಂತಿಕೆಯ ಆಟವನ್ನು ಪ್ರದರ್ಶಿಸುವ ಅಶ್ವಿನ್ ಅತ್ಯುತ್ತಮ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ತಂಡವನ್ನು 28 ಪಂದ್ಯಗಳಲ್ಲಿ ಮುನ್ನಡೆಸಿದ ಅಶ್ವಿನ್ 12 ಗೆಲುವು ಸಾಧಿಸಿದ್ದಾರೆ.

2. ಪೃಥ್ವಿ ಶಾ
ಪೃಥ್ವಿ ಶಾ ತಾನೋರ್ವ ನಾಯಕನಾಗಿ ಸಮರ್ಥ ಎಂದು ತಮ್ಮ ಕ್ರಿಕೆಟ್ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿಯೇ ಸಾಬೀತುಪಡಿಸಿದ್ದಾರೆ. ಭಾರತ ಅಂಡರ್ 19 ತಂಡವನ್ನು ಅಂಡರ್ 19 ವಿಶ್ವಕಪ್‌ನಲ್ಲಿ ಮುನ್ನಡೆಸಿದ ಪೃಥ್ವಿ ಶಾ ಒತ್ತಡದ ಸಂದರ್ಭದಲ್ಲೂ ತಾಳ್ಮೆಯಿಂದ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. 21ರ ಹರೆಯದ ಈ ಆಟಗಾರ ಈ ಬಾರಿಯ ಪ್ರತಿಷ್ಟಿತ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತವಾಗಿ ಮುನ್ನಡೆಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿಯೂ ಹೊರಹೊಮ್ಮಿದ್ದರು.

1. ಸ್ಟೀವ್ ಸ್ಮಿತ್
ಈ ಬಾರಿಯ ಐಪಿಎಲ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಸ್ಟ್ರೇಲಿಯಾದ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದೆ ಈ ಅತ್ಯುತ್ತಮ ಆಯ್ಕೆಯೂ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಅನುಭವವನ್ನು ಕೂಡ ಸ್ಟೀವ್ ಸ್ಮಿತ್ ಹೊಂದಿದ್ದಾರೆ. ಐಪಿಎಲ್‌ನಲ್ಲಿಯೂ ನಾಯಕನಾಗಿ ಸ್ಟೀವ್ ಸ್ಮಿತ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. 2017ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು 15 ಪಂದ್ಯಗಳಲ್ಲಿ ಮುನ್ನಡೆಸಿದ್ದ ಸ್ಮಿತ್ 10 ಗೆಲುವು ಸಾಧಿಸಿದ್ದು ತಂಡವನ್ನು ರನ್ನರ್‌ಅಪ್ ಸ್ತಾನಕ್ಕೇರಿಸಿದ್ದರು. ರಾಜಸ್ಥಾನ್ ರಾಯಲ್ಸ್ ತಂಡವನ್ನು 27 ಪಂದ್ಯಗಳಲ್ಲಿ ಮುನ್ನಡೆಸಿರುವ ಸ್ಮಿತ್ 15 ಗೆಲುವು ಪಡೆದಿದ್ದಾರೆ. ಹೀಗಾಗಿ ಡೆಲ್ಲಿ ತಂಡದ ಮೊದಲ ಆಯ್ಕೆ ಸ್ಟೀವ್ ಸ್ಮಿತ್ ಆಗಿರುವುದರಲ್ಲಿ ಅನುಮಾನವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications