
ಐಪಿಎಲ್ 14ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಆಟಗಾರರು ಹಾಗೂ ಅಭಿಮಾನಿಗಳು ಕಾತುರದಿಂದ ಟೂರ್ನಿಯ ಆರಂಭಕ್ಕೆ ಕಾಯುತ್ತಿದ್ದಾರೆ. ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿ ಏಳನೇ ಸ್ಥಾನಿಯಾಗಿ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಸಾಕಷ್ಟು ತಯಾರಿಯೊಂದಿಗೆ ಸಜ್ಜಾಗಿದೆ. ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಚೆನ್ನೈ ತಂಡದ ಹೊಸ ಜರ್ಸಿಯನ್ನು ಬಿಡುಗಡೆಗೊಳಿಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಂಡದ ಹೊಸ ಜರ್ಸಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ಎಂಎಸ್ ಧೋನಿ ಜರ್ಸಿ ಅನಾವರಣ ಗೊಳಿಸುವ ದೃಶ್ಯವಿದೆ. ಇದರಲ್ಲಿ ಧೋನಿ ಚೆನ್ನೈ ಅಭಿಮಾನಿಗಳಿಗೆ ಸೀಟಿ ಹೊಡೆಯಲು ಆರಂಭಿಸಿ ಎಂದು ಕರೆ ನೀಡಿದ್ದಾರೆ.
Thala Dharisanam! #WearOnWhistleOn with the all new #Yellove! #WhistlePodu 💛🦁
— Chennai Super Kings (@ChennaiIPL) March 24, 2021
🛒 - https://t.co/qS3ZqqhgGe pic.twitter.com/Gpyu27aZfL
ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಐದು ಪಂದ್ಯಗಳನ್ನು ಮುಂಬೈನಲ್ಲಿ ಆಡಲಿದೆ. ಹೀಗಾಗಿ ಹೊಸ ಐಪಿಎಲ್ ಆವೃತ್ತಿಗಾಗಿ ಚೆನ್ನೈನಲ್ಲಿ ನಡೆಯುತ್ತಿದ್ದ ಅಭ್ಯಾಸ ಶಿಬಿರವನ್ನು ಸಿಎಸ್‌ಕೆ ಮುಂಬೈಗೆ ಸ್ಥಳಾಂತರಿಸಿದೆ. ಚೆನ್ನೈ ತಂಡದ ಉಳಿದ ಆಟಗಾರರು ಮುಂಬೈನಲ್ಲಿ ಜೊತೆಯಾಗಲಿದ್ದಾರೆ.
ಕಳೆದ ಬಾರಿಯ ಆವೃತ್ತಿಯಲ್ಲಿ ಐಪಿಎಲ್ ಇತಿಹಾಸದಲ್ಲಿ ಮೊಇಟ್ಟ ಮೊದಲ ಬಾರಿಗೆ ಚೆನ್ನೈ ತಂಡ ಪ್ಲೇಆಫ್ ಪ್ರವೇಶಿಸದೆಯೇ ಟೂರ್ನಿಯಿಂದ ಹೊರಬಿದ್ದಿತ್ತು. ಸ್ವತಃ ನಾಯಕ ಧೋನಿ ಕಳಪೆ ಪ್ರದರ್ಶನವನ್ನು ನೀಡಿ ತಂಡದ ಹಿನ್ನೆಡೆಗೆ ಕಾರಣರಾಗಿದ್ದರು. ಈಗ ಹೊಸ ಆವೃತ್ತಿಗೆ ಮತ್ತಷ್ಟು ಬಲಿಷ್ಠವಾಗಿ ಧೋನಿ ಬಳಗ ಕಣಕ್ಕಿಳಿಯಲು ಸಜ್ಜಾಗಿದೆ.
ಐಪಿಎಲ್ 14ನೇ ಆವೃತ್ತಿಗಾಗಿ ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್, ಇಂಗ್ಲೆಂಡ್ ಆಲ್‌ರೌಂಡರ್ ಮೊಯೀನ್ ಅಲಿ ಚೇತೇಶ್ವರ್ ಪೂಜಾರ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಸಿ ಹರಿ ನಿಶಾಂತ್, ಹರಿಶಂಕರ್ ರೆಡ್ಡಿ ಮತ್ತು ಭಗತ್ ವರ್ಮ ಕೂಡ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ.