ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಪಂದ್ಯ ಯಾವುದು ಗೊತ್ತಾ?

ದೇಶಾದ್ಯಂತ ಕೊರೊನಾವೈರಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಈ ಮೊದಲೇ ನಿಶ್ಚಯಿಸಿದಂತೆ ಮೈದಾನದಲ್ಲಿ ವೀಕ್ಷಕರಿಗೆ ಅವಕಾಶ ನೀಡದೆ ನಡೆಸಲಾಗುತ್ತಿದೆ. ಹೀಗಾಗಿ ಈ ಬಾರಿ ಟಿವಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಆದರೆ ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆ ಹೆಚ್ಚಿರುವ ಕಾರಣದಿಂದಾಗಿ ನಿರೀಕ್ಷೆಯಷ್ಟು ಮಂದಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿಲ್ಲ. ಆದರೂ ಅತಿ ರೋಚಕವೆನಿಸುವ ಪಂದ್ಯಗಳು ಮಾತ್ರ ದಾಖಲೆಯ ಮಟ್ಟದಲ್ಲಿಯೇ ವೀಕ್ಷಣೆಗಳನ್ನು ಪಡೆದುಕೊಂಡಿವೆ.
ಪ್ರಸ್ತುತ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯ 6.7 ಮಿಲಿಯನ್ ವೀಕ್ಷಣೆಗಳನ್ನು ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪಡೆದುಕೊಂಡಿತ್ತು. ಇದು ಕಳೆದ ಬಾರಿಯ ಐಪಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯದ ವೀಕ್ಷಣೆಗೆ ಹೋಲಿಸಿದರೆ 25 ರಿಂದ 30% ಕಡಿಮೆ ವೀಕ್ಷಣೆಯಾಗಿತ್ತು. ನಂತರ ಏಪ್ರಿಲ್ 21ರಂದು ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ರೋಚಕ ಪಂದ್ಯ 7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಳ್ಳುವ ಮೂಲಕ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಪಂದ್ಯ ಎನಿಸಿಕೊಂಡಿತ್ತು.
ಆದರೆ ಇದೀಗ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಶನಿವಾರ (ಮೇ 1) ನಡೆದ ಪಂದ್ಯ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎಂಬ ಮೈಲಿಗಲ್ಲನ್ನು ನಿರ್ಮಿಸಿದೆ. ಈ ಎರಡೂ ತಂಡಗಳ ನಡುವೆ ದೊಡ್ಡ ಹಣಾಹಣಿಯೇ ನಡೆದ ಕಾರಣದಿಂದ ಈ ಪಂದ್ಯವನ್ನು ಅತಿಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತ್ತು. 219 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಪಂದ್ಯದ ಕೊನೆಯ ಎಸೆತದವರೆಗೂ ಹೋರಾಡಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿ 4 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು. ಪಂದ್ಯ ಶುರುವಿನಿಂದ ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಕಾರಣ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ 8.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಪಂದ್ಯ ಎನಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications