
ಒಂದೆಡೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೀಮಿತ ಓವರ್‌ಗಳ ಸರಣಿಯಲ್ಲಿ ತೊಡಗಿಸಿಕೊಂಡಿದ್ದರೆ ಮತ್ತೊಂದೆಡೆ ಐಪಿಎಲ್‌ಗೆ ಸಂಬಂಧಿಸಿದ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ. ಬಹುತೇಕ ಫ್ರಾಂಚೈಸಿಗಳ ಆಟಗಾರರು ಈಗಾಗಲೇ ತಮ್ಮ ಅಭ್ಯಾಸವನ್ನು ಆರಂಭಿಸಿದ್ದು ಮಹತ್ವದ ಟೂರ್ನಿಗೆ ಸನ್ನಧರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ತಂಡ ಹೊಸ ಬೌಲಿಂಗ್ ಕೋಚ್‌ಅನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಆಸ್ಟ್ರೇಲಿಯಾದ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಡೇಮಿಯನ್ ರೈಟ್ ಪಂಜಾಬ್ ತಂಡದ ಕೋಚ್ ನೇಮಕಗೊಂಡಿದ್ದಾರೆ. ಹೀಗಾಗಿ ಮುಂಬರುವ ಏಪ್ರಿಲ್ 19ರಿಂದ ಆರಂಭವಾಗಲಿರುವ ಐಪಿಎಲ್ ಆವೃತ್ತಿಯಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಪಂಜಾಬ್ ಕೋಚಿಂಗ್ ಬಳಗವನ್ನು ರೈಡ್ ಕೂಡಿಕೊಳ್ಳಲಿದ್ದಾರೆ.
45ರ ಹರೆಯದ ಡೇನಿಯಲ್ ರೈಟ್ ಬೆಂಗಳೂರು ಅಂಡರ್ 19 ತಂಡದ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಕೋಚ್ ಹಾಗೂ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕರೂ ಆಗಿರುವ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಕೆಎಲ್ ರಾಹುಲ್ ಪಡೆಗೆ ಮತ್ತಷ್ಟು ನೆರವಾಗುವ ನಿರೀಕ್ಷೆಯಿದೆ.
"ಪಂಜಾಬ್ ಕಿಂಗ್ಸ್ ಪರ ಬೌಲಿಂಗ್ ಕೋಚ್ ಆಗಿ ನೇಮಕವಾಗಿರುವುದು ನನಗೆ ಸಂತಸ ತಂದಿದೆ. ತಂಡ ಉತ್ತಮವಾಗಿ ಕಾಣುತ್ತಿದ್ದು ಈ ತಂಡದಲ್ಲಿ ಅಪಾರ ಸಾಮರ್ಥ್ಯವಿದೆ. ಐಪಿಎಲ್‌ನ ಈ ಋತುವಿನಲ್ಲಿ ಅದ್ಭುತ ಬೆಂಬಲ ಸಿಬ್ಬಂದಿಗಳ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ" ಎಂದು ಡೇಮಿಯನ್ ರೈಡ್ ಪ್ರತಿಕ್ರಿಯಿಸಿದ್ದಾರೆ.
ಡೇಮಿಯನ್ ರೈಟ್ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ತಂಡಗಳಾದ ಹೊಬಾರ್ಟ್ ಹರಿಕೇನ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ಜೊತೆ ಕೆಲಸ ಮಾಡಿದ್ದಾರೆ, ನ್ಯೂಜಿಲೆಂಡ್ ತಂಡದ ಬೌಲಿಂಗ್ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.