ಎಂಐ 6ನೇ ಐಪಿಎಲ್ ಟ್ರೋಫಿ ಗೆಲ್ಲದಂತೆ ತಡೆಯಬಲ್ಲ ತಂಡ ಹೆಸರಿಸಿದ ಬ್ರಾಡ್ ಹಾಗ್!

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಶುರುವಾಗಲಿವೆ. ಈ ಬಾರಿ ಯಾರು ಗೆಲ್ಲಲಿದ್ದಾರೆ ಅನ್ನೋದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಸದ್ಯ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ತಂಡಗಳು ಕೂಡ ಪ್ಲೇ ಆಫ್ಸ್ ಪ್ರವೇಶದ ಅವಕಾಶಗಳನ್ನು ಎದುರು ನೋಡುತ್ತಿವೆ. ಆರಂಭಿಕ ಹಂತದಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದರೂ ದ್ವಿತೀಯ ಹಂತದಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡುವುದಕ್ಕಾಗಿ ಕೆಳ ಸ್ಥಾನಗಳಲ್ಲಿರುವ ತಂಡಗಳು ತಯಾರಿ ನಡೆಸುತ್ತಿವೆ.
ಆಸ್ಟ್ರೇಲಿಯಾದ ಮಾಜಿ ಎಡಗೈ ಸ್ಪಿನ್ನರ್ ಬ್ರಾಡ್ ಹಾಗ್ ಈ ಬಾರಿಯ ಐಪಿಎಲ್‌ನಲ್ಲಿ ಅತೀ ಬಲಿಷ್ಠ ತಂಡ ಯಾವುದೆಂದು ಹೆಸರಿಸಿದ್ದಾರೆ. ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿರುವ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಬಲ್ಲ ತಂಡವೂ ಇದೆಂದು ಹಾಗ್ ಹೇಳಿದ್ದಾರೆ. ಹಾಗಾದರೆ ಹಾಗ್ ಹೇಳಿರುವ ತಂಡ ಯಾವುದು?

ಐಪಿಎಲ್ 2021ರಲ್ಲಿ ಬಲಿಷ್ಠ ತಂಡವಿದು
ಐಪಿಎಲ್ 2021ರ ಸೀಸನ್‌ನಲ್ಲಿ ಅತೀ ಬಲಿಷ್ಠ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ. ರಿಷಭ್ ಪಂತ್ ಮುಂದಾಳತ್ವದ ಡೆಲ್ಲಿ ಈ ಬಾರಿ ಟ್ರೋಫಿ ಗೆಲ್ಲಬಲ್ಲ ತಂಡ ಎಂದು ಹಾಗ್ ಅಭಿಪ್ರಾಯಿಸಿದ್ದಾರೆ. ಯೂ ಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ ಬ್ರಾಡ್ ಹಾಗ್, ಡಿಸಿ ಇನ್ನೂ ಬಲಿಷ್ಠ ತಂಡವಾಗುತ್ತದೆ; ಹೇಗೆಂದರೆ ಶ್ರೇಯಸ್ ಐಯ್ಯರ್ ಸೇರ್ಪಡೆ ಮತ್ತು ಆರ್ ಅಶ್ವಿನ್ ತಂಡಕ್ಕೆ ಮತ್ತೂ ಬಲ ತುಂಬಲಿದ್ದಾರೆ ಎಂದಿದ್ದಾರೆ. ಕೋವಿಡ್-19 ಕಾರಣದಿಂದ ಮೊದಲ ಐಪಿಎಲ್ ಹಂತ ಅರ್ಧಕ್ಕೆ ನಿಲ್ಲಿಸಲ್ಪಟ್ಟಿದ್ದೂ ಕೂಡ ಡೆಲ್ಲಿಗೆ ಒಂದು ರೀತಿಯಲ್ಲಿ ನೆರವಾಗಿದೆ ಎಂದು ಹಾಗ್ ತಿಳಿಸಿದ್ದಾರೆ. ದ್ವಿತೀಯ ಹಂತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ಡಿಸಿ ತನ್ನ ಸ್ಪರ್ಧೆ ಆರಂಭಿಸಲಿದೆ. ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಅಗ್ರ ಸ್ಥಾನದಲ್ಲಿದೆ. 8 ಪಂದ್ಯಗಳನ್ನಾಡಿರುವ ಡಿಸಿ 6 ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ.

ಎಂಐ ಸೋಲಿಸಬಲ್ಲ ಬಲಿಷ್ಠ ತಂಡ
"ಈ ಐಪಿಎಲ್‌ನಲ್ಲಿ ಅತೀ ಬಲಿಷ್ಠ ತಂಡವೆಂದರೆ ನನ್ನ ಪ್ರಕಾರ ಅದು ಡೆಲ್ಲಿ ಕ್ಯಾಪಿಟಲ್ಸ್. ಈ ಬಿಡುವಿನ ವೇಳೆ ಡೆಲ್ಲಿ ತಂಡಕ್ಕೆ ಶ್ರೇಯಸ್ ಐಯ್ಯರ್ ಬಲ ಸಿಗುವಂತಾಯ್ತು. ಶ್ರೇಯಸ್ ಲಭ್ಯತೆ ಡಿಸಿಗೆ ವಿದೇಶಿ ಆಟಗಾರರ ಮಧ್ಯೆ ವೈವಿಧ್ಯತೆ ನೀಡಿದೆ. ಡಿಸಿ ಈಗ ಸ್ಟೀವ್ ಸ್ಮಿತ್ ಅವರನ್ನು ಅವಲಂಬಿಸಬೇಕೆಂದೇನೂ ಇಲ್ಲ. ಅವರಿಗೆ ರವಿಚಂದ್ರನ್ ಅಶ್ವಿನ್ ಅವರ ಬಲವೂ ದೊರೆತಿದೆ. ಆರ್ ಅಶ್ವಿನ್ ಮತ್ತು ಐಯ್ಯರ್ ಮರಳಿದ್ದರಿಂದ ಡಿಸಿ ಇನ್ನೂ ಬಲಿಷ್ಠವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಆರನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲದಂತೆ ತಡೆಯಬಲ್ಲ ಏಕಮಾತ್ರ ತಂಡವೆಂದರೆ ಅದು ಡೆಲ್ಲಿ. ನಾನು ನೋಡಿದರಲ್ಲಿ ಬಲಿಷ್ಠ ಮತ್ತು ಸಮತೋಲಿತ ತಂಡ ಡಿಸಿ. ಅದು ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಬೇಕಾದರೆ ದಿಟ್ಟವಾಗಿ ಎದುರಿಸಬಲ್ಲದು," ಎಂದು ಹಾಗ್ ಹೇಳಿದ್ದಾರೆ.

27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications