
ಶಾರ್ಜಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಇಂದು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆದರೆ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಈ ಟೂರ್ನಿಯ ಲೀಗ್ ಹಂತದಲ್ಲಿ 14 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಗೆದ್ದು 3ನೇ ಸ್ಥಾನವನ್ನು ಪಡೆದುಕೊಂಡಿದೆ. ಲೀಗ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಂತಿಮ ಎಸೆತದಲ್ಲಿ ರೋಮಾಂಚನಕಾರಿಯಾಗಿ ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿದೆ. ಮತ್ತೊಂದೆಡೆ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ಪ್ಲೇ ಆಫ್‌ಗೆ ಮುಂಬೈ ಇಂಡಿಯನ್ಸ್ ಕಡೆಯಿಂದ ತೀವ್ರ ಪೈಪೋಟಿ ಎದುರಿಸಿ ನೆಟ್‌ರನ್‌ರೇಟ್ ಆಧಾರದಲ್ಲಿ ನಾಲ್ಕನೇ ಸ್ಥಾನ ಸಂಪಾದಿಸಿದೆ.
ಈ ಮಧ್ಯೆ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಹವಣಿಸುತ್ತಿದೆ. 2009 ಹಾಗೂ 2016ರಲ್ಲಿ ಫೈನಲ್ ಹಂತಕ್ಕೇರಿ ರನ್ನರ್‌ಅಪ್ ಆಗಿ ದ್ದು ಮಾತ್ರ ಆರ್‌ಸಿಬಿ ತಂಡದ ಈವರೆಗಿನ ಅತ್ಯುನ್ನತ ಸಾಧನೆಯಾಗಿದೆ. ಮತ್ತೊಂದೆಡೆ ಕೆಕೆಆರ್ ಈಗಾಗಲೇ ಎರಡು ಬಾರಿ ಟ್ರೋಫಿ ಗೆದ್ದಿದ್ದು ಮೂರನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ನಡೆಸಲಿದೆ ಎರಡೂ ತಂಡಗಳು.
ಇನ್ನು ಇಂದಿನ ಈ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಕೂಡ ಕೆಲ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸುವ ನಿರೀಕ್ಷೆಯಿದೆ. ಅಂಥಾ ಸಂಭಾವ್ಯ ಮೈಲಿಗಲ್ಲು ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಮುಂದೆ ಓದಿ..
ಹರ್ಷಲ್ ಪಟೇಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಪ್ರಸ್ತುತ 14 ಪಂದ್ಯಗಳಿಂದ 30 ವಿಕೆಟ್ ಸಂಪಾದಿಸಿದ್ದು ಪರ್ಪಲ್ ಕ್ಯಾಪ್ ಧರಿಸಿದ್ದಾರೆ. ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಡ್ವೇನ್ ಬ್ರಾವೊ (32) ಅವರ ದಾಖಲೆಯನ್ನು ಹಿಂದಿಕ್ಕಲು ಹರ್ಷಲ್ ಪಟೇಲ್‌ಗೆ ಕೇವಲ 3 ವಿಕೆಟ್ ಅಗತ್ಯವಿದೆ.
ಮೊಹಮ್ಮದ್ ಸಿರಾಜ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ಮೊಹಮ್ಮದ್ ಸಿರಾಜ್ ಐಪಿಎನ್‌ನಲ್ಲಿ 50 ವಿಕೆಟ್ ಸಂಪಾದಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗುವ ಸನಿಹದಲ್ಲಿದ್ದಾರೆ. ಸಿರಾಜ್ ಈ ಪಂದ್ಯದಲ್ಲಿ ಕೇವಲ 2 ವಿಕೆಟ್ ಪಡೆದರೆ ಈ ಸಾಧನೆಯನ್ನು ಪೂರ್ಣಗೊಳಿಸಲಿದ್ದಾರೆ.
ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 900 ಬೌಂಡರಿ ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಾಧನೆಗಾಗಿ ಕೊಹ್ಲಿ ಈ ಪಂದ್ಯದಲ್ಲಿ 4 ಬೌಂಡರಿಗಳನ್ನು ಗಳಿಸಬೇಕಿದೆ.
ದಿನೇಶ್ ಕಾರ್ತಿಕ್: ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ 400 ಬೌಂಡರಿಯ ಮೈಲಿಗಲ್ಲು ತಲುಪುವ ಹತ್ತಿರದಲ್ಲಿದ್ದಾರೆ. ಇದಕ್ಕಾಗಿ ಡಿಕೆ ಈ ಪಂದ್ಯದಲ್ಲಿ ಕೇವಲ ಎರಡು ಬೌಂಡರಿ ಪಡೆಯಬೇಕಿದೆ. ಇನ್ನು ಈ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಒಟ್ಟಾರೆ ಟಿ 20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳಿಂದ 8 ಸಿಕ್ಸರ್‌ಗಳಷ್ಟು ದೂರದಲ್ಲಿದ್ದಾರೆ.
ಇಯಾನ್ ಮಾರ್ಗನ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯೋನ್ ಮಾರ್ಗನ್ ಕೋಲ್ಕತ್ತಾ ಮೂಲದ ಫ್ರಾಂಚೈಸಿಗಾಗಿ 1000 ರನ್ ಗಳಿಸಿದ 13 ನೇ ಆಟಗಾರನಾಗಲು 14 ರನ್ ಗಳಿಸಬೇಕಿದೆ.
ಸುನಿಲ್ ನರೈನ್: ಕೋಲ್ಕತಾ ನೈಟ್ ರೈಡರ್ಸ್ ಸ್ಪಿನ್ನರ್ ಸುನೀಲ್ ನರೈನ್ ಐಪಿಎಲ್‌ನಲ್ಲಿ 1000 ರನ್ ಪೂರೈಸಲು 74 ರನ್‌ಗಳ ಅಗತ್ಯವಿದೆ. ಬೌಲಿಂಗ್‌ನಲ್ಲಿ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 419 ವಿಕೆಟ್ ಪಡೆದಿರುವ ಸುನಿಲ್ ನರೈನ್ ಮಹತ್ವದ ದಾಖಲೆ ಬರೆಯಲು ಹತ್ತಿರದಲ್ಲಿದ್ದಾರೆ. 420 ವಿಕೆಟ್ ಪಡೆದು ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿರುವ ಇಮ್ರಾನ್ ತಾಹಿರ್ ಅವರನ್ನು ಹಿಂದಿಕ್ಕುವ ಅವಕಾಶ ಕೂಡ ಸುನಿಲ್ ನರೈನ್‌ಗೆ ಇದೆ. ಇದಕ್ಕಾಗಿ ಸುನಿಲ್ ನರೂನ್ ಕೇವಲ 2 ವಿಕೆಟ್ ಪಡೆಯಬೇಕಿದೆ.
ಶಕೀಬ್ ಅಲ್ ಹಸನ್: ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಈವರೆಗೆ 47 ವಿಕೆಟ್ ಪಡೆದಿದ್ದಾರೆ. ಮೂರು ವಿಕೆಟ್ ಪಡೆದರೆ 50 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾಗಲಿದ್ದು ಕೆಕೆಆರ್ ಪರ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಲಿದ್ದಾರೆ.
ದೇವದತ್ ಪಡಿಕ್ಕಲ್: ಆರ್‌ಸಿಬಿ ತಂಡದ ಯುವ ಆರಂಭಿಕ ಆಟಗಾರ ದೇವದತ್ತ್ ಪಡಿಕ್ಕಲ್ ತಂಡದ ಪರವಾಗಿ ಈವರೆಗೆ 863 ರನ್ ಗಳಿಸಿದ್ದಾರೆ. ಈ ಮೂಲಕ ಆರ್‌ಸಿಬಿ ಪರವಾಗಿ ಮಾಝಿ ನಾಯಕ ರಾಹುಲ್ ದ್ರಾವಿಡ್ ಗಳಿಸಿದ 898 ರನ್‌ಗಳಿಗಿಂತ 36 ರನ್‌ಗಳಷ್ಟು ಹಿಂದಿದ್ದಾರೆ. ಈ ರನ್ ಗಳಿಸಲು ಸಾಧ್ಯವಾದರೆ ಬೆಂಗಳೂರು ಮೂಲದ ಫ್ರಾಂಚೈಸಿ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಪಡಿಕ್ಕಲ್ ಐದನೇ ಸ್ಥಾನವನ್ನು ಪಡೆಯಲಿದ್ದಾರೆ. ಕರ್ನಾಟಕದ ಆಟಗಾರ ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಕೆಕೆಆರ್ ವಿರುದ್ಧ 104 ರನ್ ಗಳಿಸಿದ್ದು ಅವರ ಹೈಯೆಸ್ಟ್ ಸ್ಕೋರ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಶ್ರೀಕರ್ ಭಾರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್, ಕೈಲ್ ಜೇಮೀಸನ್, ನವದೀಪ್ ಸೈನಿ , ಟಿಮ್ ಡೇವಿಡ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್
ಕೋಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ಸ್ಕ್ವಾಡ್: ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಕೀಬ್ ಅಲ್ ಹಸನ್, ಸುನೀಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕರವರ್ತಿ, ಟಿಮ್ ಸೌಥಿ, ಹರ್ಭಜನ್ ಸಿಂಗ್, ಆಂಡ್ರೆ ರಸೆಲ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಗುರ್ಕೀರತ್ ಸಿಂಗ್ ಮನ್, ಶೆಲ್ಡನ್ ಜಾಕ್ಸನ್, ಸಂದೀಪ್ ವಾರಿಯರ್, ಟಿಮ್ ಸೀಫರ್ಟ್, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ