ಐಪಿಎಲ್ 2021 : ಟೂರ್ನಿಯನ್ನು ಮುಂದುವರೆಸಲು ಈ ದೇಶದಿಂದ ಸಿಕ್ತು ಗ್ರೀನ್ ಸಿಗ್ನಲ್

ಏಪ್ರಿಲ್ 9ರಂದು ಭಾರತದಲ್ಲಿ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿಯೇ ನಡೆದುಕೊಂಡುಬಂದಿತ್ತು. ತದನಂತರ ಐಪಿಎಲ್ ಬಯೋ-ಬಬಲ್ ಒಳಗೂ ಕೊರೊನಾ ಪ್ರವೇಶಿಸಿ ಕೆಲ ಆಟಗಾರರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪ್ರಸ್ತುತ ಐಪಿಎಲ್ ಟೂರ್ನಿಯ 29 ಪಂದ್ಯಗಳು ಈಗಾಗಲೇ ಮುಗಿದಿದ್ದು ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸುವ ಚಿಂತನೆಯಲ್ಲಿದೆ ಬಿಸಿಸಿಐ.
ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಯುಎಇ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಈ ಮೂರು ದೇಶಗಳ ಪೈಕಿ ಯಾವುದಾದರೊಂದು ದೇಶದಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ನಡೆಸಬಹುದು ಎನ್ನಲಾಗುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ್ದ ಕಾರಣ ಕಳೆದ ಬಾರಿಯ ಐಪಿಎಲ್ ಆವೃತ್ತಿಯನ್ನು ಸಹ ಯುಎಇಯಲ್ಲಿ ಯಾವುದೇ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿತ್ತು. ಹೀಗಾಗಿ ಈ ಬಾರಿಯ ಟೂರ್ನಿಯನ್ನು ಸಹ ಕಳೆದ ಬಾರಿಯ ರೀತಿಯೇ ಕೊರೊನಾ ಸೋಂಕಿಲ್ಲದ ಬೇರೆ ರಾಷ್ಟ್ರಗಳಲ್ಲಿ ನಡೆಸುವುದು ಉತ್ತಮ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗುತ್ತಿದೆ. ಇದಕ್ಕೆ ತಕ್ಕಂತೆ ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ಗಳು 2021ರ ಐಪಿಎಲ್ ಟೂರ್ನಿಯ ಆತಿಥ್ಯವನ್ನು ವಹಿಸಲು ಪ್ರಸ್ತಾಪಿಸಿವೆ.

ಇಂಗ್ಲೆಂಡ್‌ನಲ್ಲಿಯೇ ಐಪಿಎಲ್ ನಡೆಸಿ
ಕೊರೊನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿಯೇ ನಡೆಸಲಿ ಎಂದು ಎಂಸಿಸಿ, ಸರ್ರೆ, ವಾರ್ವಿಕ್‌ಷೈರ್ ಮತ್ತು ಲಂಕಾಷೈರ್ ಕೌಂಟಿಗಳು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ಪತ್ರವನ್ನು ಬರೆದು ತಿಳಿಸಿವೆ.

ಎರಡೇ ವಾರದಲ್ಲಿ ಐಪಿಎಲ್ ಮುಗಿಯುತ್ತದೆ
ಇಂಗ್ಲೆಂಡ್ ನೆಲದಲ್ಲಿ ಐಪಿಎಲ್ ನಡೆಸಲಿ ಎಂದು ಪ್ರಸ್ತಾಪಿಸಿರುವ ಕೌಂಟಿಗಳು ಎರಡೇ ವಾರದಲ್ಲಿ ಐಪಿಎಲ್ ಟೂರ್ನಿಯನ್ನು ಮುಗಿಸಿಕೊಡುತ್ತೇವೆ ಎಂದು ಹೇಳಿವೆ. ಪಂದ್ಯಗಳ ನಡುವೆ ಅಂತರ ನೀಡದೆ ದಿನಕ್ಕೆ 2-3 ಪಂದ್ಯಗಳನ್ನು ಆಯೋಜಿಸಿ ವೇಗವಾಗಿ ಎರಡು ವಾರಗಳಲ್ಲಿ ಐಪಿಎಲ್ ಮುಗಿಸುವುದಾಗಿ ಕೌಂಟಿ ಕ್ರಿಕೆಟ್ ಕ್ಲಬ್‌ಗಳು ತಿಳಿಸಿವೆ.

ಯುಎಇಗಿಂತ ಇಂಗ್ಲೆಂಡ್‌ನಲ್ಲಿಯೇ ಉತ್ತಮ
ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕಾರಣ ಯುಎಇಗೆ ಟಿ ಟ್ವೆಂಟಿ ವಿಶ್ವಕಪ್ ಸ್ಥಳಾಂತರವಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಐಪಿಎಲ್ ಉಳಿದ ಪಂದ್ಯಗಳನ್ನು ನಡೆಸುವುದರಿಂದ ಯುಎಇ ಪಿಚ್‌ಗಳು ಟಿ ಟ್ವೆಂಟಿ ವಿಶ್ವಕಪ್ ಆಡಲು ತಾಜಾ ಅನುಭವವನ್ನು ನೀಡಲಿವೆ ಎಂದು ಇಂಗ್ಲೆಂಡ್ ಕೌಂಟಿಗಳು ತಿಳಿಸಿವೆ.

ಸೆಪ್ಟೆಂಬರ್‌ನಲ್ಲಿಯೇ ಐಪಿಎಲ್
ಒಂದುವೇಳೆ ಬಿಸಿಸಿಐ ಐಪಿಎಲ್ ಪಂದ್ಯಗಳನ್ನು ನಮ್ಮಲ್ಲಿ ನಡೆಸಲು ಒಪ್ಪಿಗೆ ಸೂಚಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಐಪಿಎಲ್ ಆತಿಥ್ಯವನ್ನು ವಹಿಸಿಕೊಳ್ಳಲು ನಾವು ಸಿದ್ಧ ಎಂದು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಕ್ಲಬ್‌ಗಳು ಪ್ರಸ್ತಾಪಿಸಿವೆ.
ಇಷ್ಟೆಲ್ಲಾ ಅಂಶಗಳನ್ನು ಹೆಸರಿಸಿ ಪ್ರಸ್ತುತ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳ ಆತಿಥ್ಯ ವಹಿಸಲು ಮುಂದೆ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ಕೌಂಟಿ ಕ್ಲಬ್‌ಗಳ ಈ ಪ್ರಸ್ತಾಪವನ್ನು ಬಿಸಿಸಿಐ ಒಪ್ಪಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications