
ನವದೆಹಲಿ: 14ನೇ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿ ಆಟಗಾರರ ಮಿನಿ ಹರಾಜು ಹತ್ತಿರವಾಗುತ್ತಿರುವುದರಿಂದ ಎಲ್ಲಾ ಎಂಟು ಫ್ರಾಂಚೈಸಿಗಳು ಜನವರಿ 20ರೊಳಗಾಗಿ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಅಂತಿಮಗೊಳಿಸಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ಗೆ ನೀಡಬೇಕಿದೆ.
ಐಪಿಎಲ್ ಒಪ್ಪಂದದಲ್ಲಿಲ್ಲದ, ಮುಂದಿನ ಆಟಗಾರರ ಹರಾಜು ಕಣದಲ್ಲಿ ಕಾಣಿಸಿಕೊಳ್ಳಲು ಬಯಸುವ ಭಾರತೀಯ ಆಟಗಾರರು ಹರಾಜು ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಫೆಬ್ರವರಿ 5ರಂದು ಆನ್‌ಲೈನ್ ಮೂಲಕ 5 pmಗೆ ಒಳಗಾಗಿ ಸಲ್ಲಿಸಬೇಕಿದೆ. ಇನ್ನು ಮೂಲ ದಾಖಲೆಗಳನ್ನು ಫೆಬ್ರವರಿ 12ರ ಒಳಗಾಗಿ ಸಲ್ಲಿಸಲು ಗಡುವು ನೀಡಲಾಗಿದೆ.
ಈ ಸಂಬಂಧ ಸ್ಟೇಟ್ ಅಸೋಸಿಯೇಶನ್‌ಗಳಿಗೆ ಮೇಲ್ ಕಳುಹಿಸಲಾಗಿದೆ. ನೋಂದಾಯಿಸಿಕೊಳ್ಳುವ ಭಾರತೀಯ ಆಟಗಾರ 2021ರ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತದೆ ಎಂದು ಬಿಸಿಸಿಐ ಹಂಗಾಮಿ ಸಿಇಒ ಆಗಿರುವ ಹೇಮಾಂಗ್ ಅಮಿನ್ ವಿವರಿಸಿದ್ದಾರೆ.
2021ರ ಐಪಿಎಲ್ ಟೂರ್ನಿ ಏಪ್ರಿಲ್-ಮೇನಲ್ಲಿ ನಡೆಯುವ ನಿರೀಕ್ಷೆಯಿದೆ. ಆಟಗಾರರ ಹರಾಜು ಫೆಬ್ರವರಿ 11ರಂದು ನಡೆಯಲಿದೆ. ಮುಂದಿನ ಐಪಿಎಲ್‌ಗೆ ತಾಣ ಇನ್ನೂ ನಿರ್ಧಾರವಾಗಿಲ್ಲ. ಆಟಗಾರರ ಹರಾಜಿನ ತಾಣವೂ ಇನ್ನಷ್ಟೇ ಪ್ರಕಟವಾಗಬೇಕಿದೆ.