
ಐಪಿಎಲ್‌ನ ಎರಡನೇ ಪಂದ್ಯದಲ್ಲಿಯೂ ಆರ್‌ಸಿಬಿ ರೋಚಕವಾಗಿ ಗೆಲುವು ಸಾಧಿಸಿದೆ. ಚೆನ್ನೈನ ಸವಾಲಿನ ಪಿಚ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಅಂತಿಮ ಹಂತದಲ್ಲಿ ಬೌಲಿಂಗ್‌ನಲ್ಲಿ ತಿರುಗಿ ಬಿದ್ದ ರೀತಿ ಪಂದ್ಯದ ಗೆಲುವಿಗೆ ಕಾರಣವಾಯಿತು. ಮತ್ತೊಂದೆಡೆ ಬ್ಯಾಟಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನೀಡಿದ ಗಮನಾರ್ಹ ಕೊಡುಗೆಯೂ ಗೆಲುವಿನ ಪ್ರಮುಖ ಅಂಶಗಳಲ್ಲಿ ಒಂದು.
ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್ ಕಳೆದುಕೊಂಡಾಗ ಗ್ಲೆನ್ ಮ್ಯಾಕ್ಸ್‌ವೆಲ್ ಎಚ್ಚರಿಕೆಯಿಂದ ಆಡುತ್ತಾ ತಂಡದ ಮೊತ್ತವನ್ನು ಹೆಚ್ಚಿಸಲು ಕಾರಣರಾದರು. ಈ ಮೂಲಕ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 149 ರನ್‌ಗಳಿಸಲು ಅವರು ಕಾರಣರಾದರು. 41 ಎಸೆತ ಎದುರಿಸಿದ ಮ್ಯಾಕ್ಸ್‌ವೆಲ್ 59 ರನ್‌ಗಳಿಸಿದ್ದರು.
"ಆರ್‌ಸಿಬಿಯಲ್ಲಿ ದೊರೆತ ಆರಂಭ ಅದ್ಭುತವಾಗಿದೆ. ನನಗೆ ಇಲ್ಲಿ ನಿರ್ದಿಷ್ಟವಾದ ಪಾತ್ರವಿದೆ. ನನ್ನ ಸುತ್ತಲೂ ಇರುವ ಬ್ಯಾಟ್ಸ್‌ಮನ್‌ಗಳು ನನಗೆ ಕ್ರೀಸ್‌ನಲ್ಲಿ ನೆಲೆಯೂರಲು ಅವಕಾಶ ನೀಡುತ್ತಿದ್ದಾರೆ ಮತ್ತು ಸ್ವತಂತ್ರ್ಯವಾಗಿ ಆಡುವ ಅವಕಾಶ ನೀಡಿದ್ದಾರೆ. ಇದು ಆಸ್ಟ್ರೇಲಿಯಾ ತಂಡದಲ್ಲಿ ನಾನು ನಿರ್ವಹಿಸುವ ಪಾತ್ರಕ್ಕೆ ಸಮನಾಗಿದೆ" ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್.
"ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದರಿಂದ ನಮ್ಮಲ್ಲಿನ ಆಟಕ್ಕೆ ಪೂರಕವಾದ ಪರಿಸ್ಥಿತಿಯನ್ನು ಕಂಡುಕೊಳ್ಳಲು ಸಮಯವನ್ನು ನೀಡಿದಂತಾಗುತ್ತದೆ. ನನ್ನಿಂದ ಉತ್ತಮ ಕರ್ತವ್ಯ ಮಾಡಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಆರ್‌ಸಿಬಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ನನ್ನಿಂದ ಸಾಧ್ಯವಾಯಿತು" ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಈ ಹಿಂದೆ ಆಡಿದ 8 ಐಪಿಎಲ್ ಆವೃತ್ತಿಗಳಲ್ಲಿ ನಿರೀಕ್ಷೆಯನ್ನು ತಲುಪಿರಲಿಲ್ಲ. ಕಳೆದ ನಾಲ್ಕು ಆವೃತ್ತಿಗಳಲ್ಲಿ ಮ್ಯಾಕ್ಸ್‌ವೆಲ್ ಒಂದೇ ಒಂದು ಅರ್ಧ ಶತಕ ದಾಖಲಿಸಿರಲಿಲ್ಲ. ಆದರೆ ಆರ್‌ಸಿಬಿ ತಂಡದ ಮೊದಲ ಎರಡು ಪಂದ್ಯಗಳಲ್ಲಿಯೇ ಜವಾಬ್ಧಾರಿಯುತ ಪ್ರದರ್ಶನ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದು ತಂಡದ ಪಾಲಿಗೆ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.