
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಿಚ್ಚ ಸುದೀಪ್ ಅವರು ಏಪ್ರಿಲ್ 9ರ ಶುಕ್ರವಾರ ಸ್ಟಾರ್‌ಸ್ಪೋರ್ಟ್ಸ್‌ನ ಕ್ರಿಕೆಟ್ ಲೈವ್‌ನಲ್ಲಿ ಬರಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಪಂದ್ಯಕ್ಕೂ ಮುನ್ನ ಅಂದರೆ ಏಪ್ರಿಲ್ 9ರಂದು 6 PMಗೆ ಸುದೀಪ್ ಸ್ಟಾರ್ ಸ್ಪೋರ್ಟ್ಸ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಪ್ರಿಲ್ 9ರಂದು ನಡೆಯುವ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ 7.30 PMಗೆ ಆರಂಭಗೊಳ್ಳಲಿದೆ.
ಆರ್‌ಸಿಬಿ ಅಭಿಮಾನಿಯಾಗಿರುವ ಸುದೀಪ್, ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರು ತಂಡಕ್ಕೆ ಚಿಯರ್ ಮಾಡಲಿದ್ದಾರೆ, ಶುಭ ಹಾರೈಸಲಿದ್ದಾರೆ, ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳ ಟ್ವಿಟರ್ ಖಾತೆ ಈ ವಿಚಾರ ಖಾತರಿಪಡಿಸಿದೆ.
ಐಪಿಎಲ್‌ನ ಅಧಿಕೃತ ಪ್ರಸಾರಕ ಆಗಿರುವ ಸ್ಟಾರ್ ಸ್ಪೋರ್ಟ್ಸ್, ಟೂರ್ನಿ ಉದ್ಘಾಟನೆಯ ದಿನ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದೆ. ಹೀಗಾಗಿ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಸುದೀಪ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ ನಾಯಕರಾಗಿರುವ ಸುದೀಪ್ ಪ್ರಮುಖಾಕರ್ಷಣೆಯ ಆಟಗಾರರಾಗಿದ್ದಾರೆ.