
ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯುವ ತಾಣಗಳು ಯಾವುದೆಂಬುದು ಬಹಿರಂಗವಾಗಿದೆ. 14ನೇ ಆವೃತ್ತಿಯ ಐಪಿಎಲ್‌ನ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಂಬೈನಲ್ಲಿ ನಡೆಯುವ ನಿರೀಕ್ಷೆಯಿದೆ. ಮುಂಬೈಯ ವಿವಿಧ ಮೂರು ತಾಣಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.
ಒಂದಂತೂ ನಿಜ; ಅದೇನೆಂದರೆ ಈ ಬಾರಿಯ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತ. 13ನೇ ಆವೃತ್ತಿಯ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿತ್ತು. ಆದರೆ ಈ ಬಾರಿ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಭಾರತದಲ್ಲೇ ನಡೆಯಲಿದೆ ಎನ್ನಲಾಗಿದೆ.
2021ರ ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಂಬೈ ತಾಣಗಳಲ್ಲಿ ನಡೆದರೆ, ನಾಕೌಟ್ ಹಂತದ ಪಂದ್ಯಗಳು ಅಹ್ಮದಾಬಾದ್‌ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲೀಕ ಪಾರ್ಥ್ ಜಿಂದಾಲ್ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಈ ಸಂಗತಿ ಹೇಳಿಕೊಂಡಿದ್ದಾರೆ.
ಫೆಬ್ರವರಿ 18ರಂದು ಆಟಗಾರರ ಹರಾಜಿನ ವೇಳೆ ಚೆನ್ನೈಗೆ ಬಂದಿದ್ದ ಪಾರ್ಥ್ ಜಿಂದಾಲ್, 'ನಾನು ನೋಡಿದ ಮತ್ತು ಕೇಳಿರುವ ಪ್ರಕಾರ, ಭಾರತಕ್ಕೆ ಇಂಗ್ಲೆಂಡ್ ಪ್ರವಾಸ ಬರುವುದಾದರೆ, ಐಎಸ್‌ಎಲ್ ಗೋವಾದಲ್ಲಿ ನಡೆಯುವುದಾದರೆ, ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಭಾರತದಲ್ಲಿ ನಡೆಯುವುದಾದರೆ ಐಪಿಎಲ್ ವಿದೇಶದಲ್ಲಿ ನಡೆಯಲಿದೆ ಎಂದು ನನಗನ್ನಿಸುತ್ತಿಲ್ಲ,' ಎಂದಿದ್ದಾರೆ.
'ಒಂದು ನಗರದಲ್ಲಿ ಲೀಗ್ ಹಂತವನ್ನು ಮತ್ತು ಇನ್ನೊಂದು ಸ್ಥಳದಲ್ಲಿ ಪ್ಲೇ ಆಫ್‌ಗಳನ್ನು ನಡೆಸಬೇಕೇ ಎಂದು ಆಯೋಜಕರು ಯೋಚಿಸುತ್ತಿದ್ದಾರೆಂದು ನಾನು ನಂಬುತ್ತೇನೆ. ಮೂರು ಮೈದಾನಗಳು (ವಾಂಖೆಡೆ ಸ್ಟೇಡಿಯಂ, ಬ್ರಾಬೋರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ) ಮತ್ತು ಮೊಟೆರಾ (ಅಹಮದಾಬಾದ್) ನಾಕೌಟ್‌ಗಳನ್ನು ಆಯೋಜಿಸುತ್ತಿದೆ, ಇದು ಖಾತರಿಯಾಗಿಲ್ಲ. ಆದರೆ ಇದನ್ನು ಕೇಳಲ್ಪಟ್ಟಿದ್ದೇನೆ,' ಎಂದು ಪಾರ್ಥ್ ಜಿಂದಾಲ್ ಹೇಳಿದ್ದಾರೆ.