ಐಪಿಎಲ್ : ಪಂದ್ಯವೊಂದರಲ್ಲಿ ಅತೀ ಕಡಿಮೆ ರನ್ ಗಳಿಕೆ ಟಾಪ್ 5 ತಂಡಗಳು
ಹೊಡಿ ಬಡಿ ಆಟ ಎಂದೇ ಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರನ್ ಹೊಳೆಯೇ ಹರಿಯುತ್ತದೆ. 150+ ಮತ್ತು 200+ ರನ್‌ಗಳನ್ನು ತಂಡಗಳು ಬಾರಿಸುವ ಮೂಲಕ ಯಾವಾಗಲೂ ಬೃಹತ್ ಮೊತ್ತ ಕಲೆಹಾಕಲು ಯತ್ನಿಸುತ್ತವೆ. ಇಷ್ಟೆಲ್ಲಾ ರನ್ ಹೊಳೆಯೇ ಹರಿಯುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಕಡಿಮೆ ರನ್‌ಗಳು ಕೂಡ ದಾಖಲಾಗಿವೆ ಎಂದರೆ ನೀವು ನಂಬಲೇಬೇಕು.
ಹೌದು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿರುವ ತಂಡಗಳಿವೆ. ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್ ಗಳಿಸುವುದರ ಮೂಲಕ ಅಲ್ಪ ಮೊತ್ತವನ್ನು ಕಲೆ ಹಾಕಿತ್ತು. ಇದು ಆ ಆವೃತ್ತಿಯಲ್ಲಿ ತಂಡವೊಂದರ ಅತೀ ಕಡಿಮೆ ಮೊತ್ತವಾಗಿತ್ತು. ಆದರೆ ಇದನ್ನೂ ಮೀರಿ ಇದಕ್ಕಿಂತ ಅತೀ ಕಡಿಮೆ ರನ್‌ಗಳನ್ನು ಐಪಿಎಲ್ ಟೂರ್ನಿಯಲ್ಲಿ ತಂಡಗಳು ಕಲೆಹಾಕಿವೆ.
ಹೀಗೆ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿದ ಟಾಪ್ 5 ತಂಡಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ.

5. ಕೋಲ್ಕತ್ತಾ ನೈಟ್ ರೈಡರ್ಸ್ - 67 ರನ್ಸ್
2008ರ ಐಪಿಎಲ್ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 67 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಆ ಆವೃತ್ತಿಯಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡ ಎನಿಸಿಕೊಂಡಿತು. 68 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 5.3 ಓವರ್‌ಗಳಲ್ಲಿ ಗುರಿ ಮುಟ್ಟಿತು.

4. ಡೆಲ್ಲಿ ಡೇರ್ ಡೆವಿಲ್ಸ್ - 67 ರನ್ಸ್
2017ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 67 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಅಲ್ಪ ಮೊತ್ತ ಕಲೆಹಾಕಿತ್ತು. 68 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗಪ್ಟಿಲ್ ಅವರ ಅರ್ಧಶತಕದ ನೆರವಿನಿಂದ ಕೇವಲ 7.5 ಓವರ್‌ಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

3. ಡೆಲ್ಲಿ ಡೇರ್ ಡೆವಿಲ್ಸ್ - 66 ರನ್ಸ್
ಮತ್ತೊಮ್ಮೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ 2017ರ ಐಪಿಎಲ್ ಟೂರ್ನಿಯಲ್ಲಿ ಅಲ್ಪ ಮೊತ್ತ ದಾಖಲಿಸಿತ್ತು. ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 3 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. 214 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರಂಭದಲ್ಲಿಯೇ ಕುಸಿತವನ್ನು ಕಂಡು 66 ರನ್‌ಗಳಿಗೆ ಆಲ್ಔಟ್ ಆಗುವುದರ ಮೂಲಕ ಒಂದೇ ಆವೃತ್ತಿಯಲ್ಲಿ ಎರಡೆರಡು ಅಲ್ಪ ಮೊತ್ತವನ್ನು ದಾಖಲಿಸಿತು.

2. ರಾಜಸ್ಥಾನ್ ರಾಯಲ್ಸ್ - 58 ರನ್ಸ್
ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. 2008ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ ತಂಡ 2009ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತ್ತು. 134 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಕೇವಲ 58 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಆಗಿನ ಸಮಯಕ್ಕೆ ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡ ಎನಿಸಿಕೊಂಡಿತ್ತು.

1. ರಾಯಲ್ ಚಾಲೆಂಜರ್ಸ್ ಬೆಂಗಳೂರು - 49 ರನ್ಸ್
ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. ಅದೇ ರೀತಿ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡ ಎಂಬ ಕೆಟ್ಟ ದಾಖಲೆ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿಯೇ ಇದೆ. 2017ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 131 ರನ್ ರನ್ ಗಳಿಸಿತು. 132 ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನದ ಬಗ್ಗೆ ಯಾರೂ ಕೂಡ ಊಹೆಯನ್ನೂ ಮಾಡಿರಲಿಲ್ಲ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 49 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಇಡೀ ಐಪಿಎಲ್ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡ ಎಂಬ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಳಿಸಿರುವ ಈ ಅಲ್ಪ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಬೇರೆ ಯಾವುದೇ ತಂಡ ಇದುವರೆಗೂ ಗಳಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications