ಐಪಿಎಲ್ 2021: ರಿಷಭ್ ಪಂತ್ ನಾಯಕನಾಗಿ ಮುರಿಯಬಲ್ಲ 5 ದಾಖಲೆಗಳು

ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್ ಆರಂಭಕ್ಕೆ ದೊಡ್ಡ ಆಘಾತವೊಂದನ್ನು ಎದುರಿಸಿದೆ. ಸ್ವತಃ ತಂಡದ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಈ ನಾಯಕತ್ವದ ಜವಾಬ್ಧಾರಿ ಈಗ ಯುವ ಆಟಗಾರ ರಿಷಭ್ ಪಂತ್ ಹೆಗಲೇರಿದೆ.
ರಾಷ್ಟ್ರೀಯ ತಂಡದಲ್ಲಿ ಇತ್ತೀಚೆಗೆ ನಿರಂತರವಾಗಿ ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಪಂತ್ ಐಪಿಎಲ್‌ನಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಜೊತೆಗೆ ನಾಯಕತ್ವದ ಹೊಣೆಯೂ ಹೆಗಲೇರಿರುವುದು ಕುತೂಹಲ ಮೂಡಿಸಿದೆ. ಯುವ ಹಾಗೂ ಅನುಭವಿ ಆಟಗಾರರ ಅತ್ಯುತ್ತಮ ಬಳಗವನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಬಾರಿಯೂ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವಿರುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಕಣಕ್ಕಿಳಿಯುತ್ತಿದೆ.
ಆದರೆ ಇದೇ ಮೊದಲ ಬಾರಿಗೆ ನಾಯಕತ್ವದ ಹೊಣೆ ಹೊತ್ತಿರುವ ರಿಷಭ್ ಪಂತ್ ಐದು ಪ್ರಮುಖ ನಾಯಕತ್ವದ ದಾಖಲೆಗಳನ್ನು ಮುರಿಯುವ ಅವಕಾಶಗಳನ್ನು ಹೊಂದಿದ್ದಾರೆ. ಅವು ಯಾವುದು? ಮುಂದೆ ಓದಿ..

ಐಪಿಎಲ್ ಪ್ರಶಸ್ತಿ ಗೆಲ್ಲುವ ಕಿರಿಯ ನಾಯಕ
ಕಳೆದ ಬಾರಿಯ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿಯೂ ಡೆಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಹೊಂದಿರುವ ತಂಡಗಳಲ್ಲಿ ಒಂದಾಗಿದೆ. ಒಂದು ವೇಳೆ ಈ ಬಾರಿ ಡೆಲ್ಲಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ ರಿಷಭ್ ಪಂತ್ ಟೂರ್ನಿ ಗೆದ್ದ ಅತಿ ಕಿರಿಯ ನಾಯಕ ಎನಿಸಲಿದ್ದಾರೆ. ಈಗ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದ್ದು 2013ರಲ್ಲಿ ರೋಹಿತ್ ಶರ್ಮಾ ತನ್ನ 26ನೇ ವಯಸ್ಸಿನಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಪಂತ್‌ಗೆ ಈಗ ಕೇವಲ 23 ವರ್ಷ ವಯಸ್ಸು.

ಡೆಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಮೊದಲ ನಾಯಕ
ಐಪಿಎಲ್‌ನ ಇತಿಹಾಸದಲ್ಲಿ ಈವರೆಗೂ ಪ್ರಶಸ್ತಿ ಗೆಲ್ಲದ ತಂಡಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು. ಕಳೆದ ಬಾರಿಯ ಐಪಿಎಲ್‌ನಲ್ಲಿ ಫೈನಲ್ ಪ್ರವೇಶಿಸಿರುವುದೇ ಡೆಲ್ಲಿಯ ಅತ್ಯುನ್ನತ ಸಾಧನೆಯಾಗಿದೆ. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲಿ ಡೆಲ್ಲಿ ಪ್ರಶಸ್ತಿ ಗೆದ್ದರೆ ಡೆಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಲಿದ್ದಾರೆ.

ಐಪಿಎಲ್‌ನಲ್ಲಿ ಕೀಪರ್-ನಾಯಕನಾಗಿ ಅತಿ ಹೆಚ್ಚು ರನ್
ಐಪಿಎಲ್ ಆವೃತ್ತಿಯೊಂದರಲ್ಲಿ ವಿಕೆಟ್ ಕೀಪರ್-ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆಯಲು ರಿಷಭ್ ಪಂತ್‌ಗೆ ಉತ್ತಮ ಅವಕಾಶವಿದೆ. ಸದ್ಯ ಈ ದಾಖಲೆ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಹೆಸರಿನಲ್ಲಿದೆ. ಕಳೆದ ಆವೃತ್ತಿಯಲ್ಲಿ ರಾಹುಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ರಾಹುಲ್ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 14 ಪಂದ್ಯಗಳಲ್ಲಿ ಆಡಿದ್ದ ರಾಹುಲ್ 55.83ರ ಸರಾಸರಿಯಲ್ಲಿ 670 ರನ್‌ಗಳಿಸಿದ್ದರು.

ನಾಯಕನಾಗಿ ಚೊಚ್ಚಲ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ
ಮೊದಲ ಬಾರಿಗೆ ರಿಷಭ್ ಪಂತ್ ನಾಯಕನಾಗುತ್ತಿರುವ ಕಾರಣ ಚೊಚ್ಚಲ ಆವೃತ್ತಿಯಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗುವ ಅವಕಾಶವಿದೆ. ಇದಕ್ಕೂ ಮುನ್ನ 2018ರಲ್ಲಿ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕೇನ್ ವಿಲಿಯಮ್ಸನ್ ಆಡಿದ 17 ಪಂದ್ಯಗಳಲ್ಲಿ 735 ರನ್‌ಗಳನ್ನು ಗಳಿಸಿದ್ದರು. ಇದು ಈವರೆಗಿನ ದಾಖಲೆಯಾಗಿದ್ದು ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ರನ್ ಹೊಳೆ ಹರಿಸಿದರೆ ಈ ದಾಖಲೆ ಮುರಿಯುವ ಸಾಧ್ಯತೆಯಿದೆ.

ನಾಯಕನಾಗಿ ಚೊಚ್ಚಲ ಆವೃತ್ತಿಯಲ್ಲಿ ಅತಿ ಹೆಚ್ಚು ಗೆಲುವು
ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ದಾಖಲೆಯೊಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಹೆಸರಿನಲ್ಲಿದೆ. ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ಗೆಲುವು ಕಂಡ ದಾಖಲೆಯನ್ನು ವಾರ್ನ್ ಹೊಂದಿದ್ದಾರೆ. ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಶೇನ್ ವಾರ್ನ್ ಈ ಸಾಧನೆಯನ್ನು ಮಾಡಿದ್ದರು. ಆ ಟೂರ್ನಿಯಲ್ಲಿ ವಾರ್ನ್ ಪಡೆ 13 ಗೆಲುವು ಸಾಧಿಸಿತ್ತು. ಇದು ಈವರೆಗೂ ದಾಖಲೆಯಾಗಿಯೇ ಉಳಿದುಕೊಂಡಿದೆ. ಈ ಅತ್ಯಂತ ವಿಶೇಷ ದಾಖಲೆಯನ್ನು ಮುರಿಯುವ ಅವಕಾಶವೂ ರಿಷಭ್ ಪಂತ್ ಮುಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications