
ಇಯಾನ್ ಮಾರ್ಗನ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಎರಡು ತಂಡಗಳಿಗೂ ಇಂದಿನ ಪಂದ್ಯದ ಗೆಲುವು ಬಹಳ ಮುಖ್ಯವಾಗಿದೆ.
2008ರಿಂದ ಈವರೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಒಟ್ಟು 27 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ದೊಡ್ಡ ಅಂತರದಿಂದ ಮೇಲುಗೈ ಸಾಧಿಸಿದೆ. ಕೊಲ್ಕತ್ತಾ 18 ಬಾರಿ ಗೆದ್ದಿದ್ದರೆ ಪಂಜಾಬ್ ಗೆಲುವು ಸಾಧಿಸಿದ್ದು ಕೇವಲ 9 ಬಾರಿ ಮಾತ್ರ.
ಇನ್ನು ಈ ಹಿಂದಿನ ಐದು ಪಂದ್ಯಗಳ ಫಲಿತಾಂಶವನ್ನು ಗಮನಿಸಿದಾಗಲೂ ಕೆಕೆಆರ್ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. ಕಳೆದ ಐದು ಪಂದ್ಯಗಳಲ್ಲಿ ಕೊಲ್ಕತ್ತಾ ನಾಲ್ಕು ಪಂದ್ಯದಲ್ಲಿ ಗೆದ್ದಿದೆ. ಪಂಜಾಬ್ ಒಂದು ಪಂದ್ಯದಲ್ಲಿ ಮಾತ್ರವೇ ವಿಜಯಿಯಾಗಿದೆ. ಕಳೆದ ಬಾರಿಯ ಆವೃತ್ತಿಯಲ್ಲಿ ಎರಡು ತಂಡಗಳು ಕೂಡ ಒಂದು ಗೆಲುವು ಒಂದು ಸೋಲಿನ ಫಲಿತಾಂಶವನ್ನು ಪಡೆದುಕೊಂಡಿದೆ.
ಇನ್ನು ಈ ಎರಡು ತಂಡಗಳ ಮುಖಾಮುಖಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಗೌತಮ್ ಗಂಭೀರ್ ಅತಿ ಹೆಚ್ಚು ಯಶಸ್ಸು ಸಾಧಿಸಿದ ಆಟಗಾರನಾಗಿದ್ದು ಅವರು 492 ರನ್‌ಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ 438 ರನ್‌ಗಳಿಸಿರುವ ರಾಬಿನ್ ಉತ್ತಪ್ಪ ಇದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ ಕೆಕೆಆರ್ ಆಲ್‌ರೌಂಡರ್ ಸುನಿಲ್ ನರೈನ್‌ಗೆ ಹೆಚ್ಚಿನ ಯಶಸ್ಸು ದೊರೆತಿದೆ. ಈ ಎರಡು ತಂಡಗಳ ಮುಖಾಮುಖಿಯಲ್ಲಿ ನರೈನ್ 28 ವಿಕೆಟ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ 14 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಹಾಗೂ ಪಿಯೂಷ್ ಚಾವ್ಲಾ ಇದ್ದಾರೆ.