
ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಗೆಲುವಿಗಿಂತ ಹೆಚ್ಚು ಸೋಲನ್ನು ಕಂಡಿದೆ. ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡು ತಂಡಗಳು ಕೂಡ ಈ ಬಾರಿಯ ಆವೃತ್ತಿಯ ಆರಂಭಿಕ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದು ಎರಡರಲ್ಲಷ್ಟೇ ಗೆಲುವು ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವುದು ಎರಡು ತಂಡಗಳಿಗೂ ಬಹುಮುಖ್ಯವಾಗಿದೆ.
ಐಪಿಎಲ್‌ನಲ್ಲಿ ಈ ಎರಡು ತಂಡಗಳು ಈವರೆಗೆ ಒಟ್ಟು 24 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡು ತಂಡಗಳು ಕೂಡ ತಲಾ 12 ಗೆಲುವು ಸಾಧಿಸಿ ಸಮಬಲವನ್ನು ಸಾಧಿಸಿಕೊಂಡಿದೆ.
ಕಳೆದ ಐದು ಪಂದ್ಯಗಳ ಇತಿಹಾಸವನ್ನು ಗಮನಿಸಿದರೆ ರಾಜಸ್ಥಾನ್ ರಾಯಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಈ ಹಿಂದಿನ ಐದು ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಮುಂಬೈ ಇಂಡಿಯನ್ಸ್ ಕೇವಲ ಒಂದು ಗೆಲುವು ಮಾತ್ರವೇ ಸಾಧಿಸಿದೆ.
ಇನ್ನು ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್‌ಗಳಲ್ಲಿ ಸಂಜು ಸ್ಯಾಮ್ಸನ್ ಅಗ್ರ ಸ್ಥಾನದಲ್ಲಿದ್ದಾರೆ. ಈ ಎರಡು ತನಡಗಳ ಮುಖಾಮುಖಿಯಲ್ಲಿ ಸಂಜು ಸ್ಯಾಮ್ಸನ್ 485 ರನ್‌ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ 406 ರನ್‌ಗಳಿಸಿರುವ ಅಜಿಂಕ್ಯ ರಹಾನೆ ಇದ್ದಾರೆ. 3ನೇ ಸ್ಥಾನದಲ್ಲಿ 357 ರನ್‌ಗಳಿಸಿರುವ ಕಿರಾನ್ ಪೊಲಾರ್ಡ್ ಇದ್ದಾರೆ.
ಬೌಲರ್‌ಗಳಲ್ಲಿ 17 ವಿಕೆಟ್ ಕಳೆದುಕೊಂಡಿರುವ ಧವಳ್ ಕುಲಕರ್ಣಿ ಅತಿ ಹೆಚ್ಚು ಯಶಸ್ಸು ಕಂಡ ಬೌಲರ್ ಎನಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಕಿರಾನ್ ಪೊಲಾರ್ಡ್ ಇದ್ದು 15 ವಿಕೆಟ್ ಸಂಪಾದಿಸಿದ್ದಾರೆ. ಮೂರನೇ ಸ್ಥಾನದಲ್ಲಿ 14 ವಿಕೆಟ್ ಪಡೆದುಕೊಂಡಿರುವ ಹರ್ಭಜನ್ ಸಿಂಗ್ ಇದ್ದಾರೆ.