
ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ ನಟರಾಜನ್ ಕಲೆದ ಎರಡು ಪಂದ್ಯಗಳಿಂದ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ನಟರಾಜನ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಮಾಹಿತಿಯನ್ನು ತಂಡದ ಮ್ಯಾನೇಜ್‌ಮೆಂಟ್ ನೀಡಿತ್ತು. ಈಗ ಇಡೀ ಟೂರ್ನಿಯಿಂದಲೇ ನಟರಾಜನ್ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ನಟರಾಜನ್ ಮೊಣಕಾಲಿನ ನೋವಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಸನ್‌ರೈಸರ್ಸ್ ಪರವಾಗಿ ಮುಂದಿನ ಎಲ್ಲಾ ಪಮದ್ಯಗಳಿಂದಲೂ ನಟ್ಟು ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ಈ ವಿಚಾರವಾಗಿ ಅಧಿಕೃತವಾಗಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಕ್ರಿಕ್ ಬಜ್ ಈ ಬಗ್ಗೆ ವರದಿಯನ್ನು ಮಾಡಿದ್ದು ತಂಡದಿಂದ ಇನ್ನಷ್ಟೇ ಅಧಿಕೃತವಾಗಿ ಖಚಿತವಾಗಬೇಕಿದೆ.
ಕಳೆದ ಬಾರಿಯ ಐಪಿಎಲ್‌ನಲ್ಲಿ ನಟರಾಜನ್ ಅದ್ಭುತ ದಾಳಿಯ ಮೂಲಕ ಗಮನ ಸೆಳೆದಿದ್ದರು. ಹೈದರಾಬಾದ್ ಪರವಾಗಿ ನೀಡಿದ ಶ್ರೇಷ್ಠ ಪ್ರದರ್ಶನದ ಕಾರಣದಿಂದಾಗಿ ನಟರಾಜನ್ ಭಾರತೀಯ ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗಿದ್ದರು. ಭಾರತ ತಂಡದ ಪರವಾಗಿ ಆಸ್ಟ್ರೇಲಿಯಾದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದಾರೆ ನಟರಾಜನ್.