
ಬೆಂಗಳೂರು, ಅಕ್ಟೋಬರ್ 6: ಈ ಬಾರಿಯ ಐಪಿಎಲ್ ಆವೃತ್ತಿಯಯಲ್ಲಿಯೂ ಕೆಲ ಯುವ ಆಟಗಾರರು ಅದ್ಭುತ ಆಟವನ್ನು ಪ್ರದರ್ಶಿಸಿ ಮಿಂಚಿದ್ದಾರೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೆಕೆಆರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ಉಮ್ರಾನ್ ಮಲಿಕ್ ಅವರಂತಾ ಆಟಗಾರರು ಈ ಐಪಿಎಲ್‌ನ ತಾರೆಗಳಾಗಿ ಹೊರಹೊಮ್ಮಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತಾ ಪ್ರತಿಕ್ರಿಯಿಸಿದ್ದು 'ಇನ್ನಾದರೂ ನಾವು ದೇಶೀಯ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಬೇಕು' ಎಂದು ಹೇಳಿದ್ದಾರೆ.
ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂನಲ್ಲಿ ಇತ್ತೀಚೆಗೆ ವಿಡಿಯೋ ಹಂಚಿಕೊಂಡಿರುವ ಮಾಜಿ ಆಟಗಾರ ಮತ್ತು ವಿಕೆಟ್ ಕೀಪರ್ ದೀಪ್ ದಾಸ್ ಗುಪ್ತಾ, 'ಐಪಿಎಲ್ 2021ನಲ್ಲಿ ಸಿಎಸ್‌ಕೆ ಓಪನರ್ ರುತುರಾಜ್ ಗಾಯಕ್ವಾಡ್ ಮತ್ತು ಕೆಕೆಆರ್ ಆಲ್ ರೌಂಡರ್ ವೆಂಕಟೇಶ್ ಅಯ್ಯರ್, ಆವೇಶ್ ಖಾನ್, ಉಮ್ರಾನ್ ಮಲಿಕ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಇಂತಹ ಯುವ ಪ್ರತಿಭೆಗಳನ್ನು ನಾವು ಗುರುತಿಸಬೇಕಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ವೆಂಕಟೇಶ್ ಅಯ್ಯರ್ ಅವರು ಮಧ್ಯಪ್ರದೇಶದ ಪರ ಆಡುವುದನ್ನು ನಾನು ನೋಡಿದ್ದೇನೆ. ಅವರು ಇದೇ ಮಾದರಿಯಲ್ಲಿ ಅಲ್ಲಿಯೂ ಬ್ಯಾಟ್ ಬೀಸುತ್ತಿದ್ದರು. ಐಪಿಎಲ್ ವೇದಿಕೆಯಲ್ಲಿಯೂ ಅವರು ಅಂಥಾದ್ದೇ ಯಶಸ್ಸು ಸಾಧಿಸಬಹುದು ಎಂದು ನಾನು ಭಾವಿಸಿದ್ದೆ. ಐಪಿಎಲ್ ಮಟ್ಟವು ಅಂತರಾಷ್ಟ್ರೀಯ ಕ್ರಿಕೆಟ್‌ಗಿಂತ ಸ್ವಲ್ಪವೇ ಕೆಳಗಿದೆ. ಹಾಗಾಗಿ ಈ ಮಟ್ಟದಲ್ಲಿ ಯಾರಾದರೂ ಚೆನ್ನಾಗಿ ಆಡಿದರೆ, ಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಿದ್ಧನಾಗಿದ್ದಾನೆ ಎಂದೇ ಅರ್ಥ' ಎಂದು ಅವರು ಹೇಳಿದ್ದಾರೆ.
ದೀಪ್‌ದಾಸ್ ಗುಪ್ತ ದೇಶೀಯ ಪ್ರತಿಭೆಯನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ದೇಶೀಯ ಪ್ರತಿಭೆಗಳನ್ನು ಹೆಚ್ಚಿಸುವ ಜೊತೆ ಜೊತೆಗೆ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಹಾಯವಾಗಿದೆ ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ದೀಪ್ ದಾಸ್‌ಗುಪ್ತಾ ಟಿ20 ವಿಶ್ವಕಪ್ ವಿಚಾರಬಾಗಿಯೂ ಪ್ರತಿಕ್ರಿಯಿಸಿದ್ದಾರೆ. ಚುಟುಕು ವಿಶ್ವಕಪ್‌ಗೆ ಕೆಲವೇ ವಾರಗಳು ಬಾಕಿ ಇರುವಾಗ ದಾಸ್‌ಗುಪ್ತಾ ಟೀಂ ಇಂಡಿಯಾಗೆ ಪ್ರತಿಭಾವಂತ ಆಲ್‌ರೌಂಡರ್‌ಗಳ ಕೊರತೆಯಿದೆ ಎಂಬ ಅಭಿಪ್ರಾಯವನ್ನು ವ್ಯಕ್ರಪಡಿಸಿದ್ದಾರೆ. ವೆಂಕಟೇಶ್ ಅಯ್ಯರ್ ಅವರಂತಹ ಆಲ್‌ರೌಂಡರ್‌ಗಳು ಅಗ್ರ ಐದರಲ್ಲಿಯೂ ಆಡಬಲ್ಲರು ಜೊತೆಗೆ ಬೌಲಿಂಗ್ ಅಲ್ಲಿಯೂ ಉತ್ತಮ ಪ್ರದರ್ಶನ ನೀಡುವರು. ಇದು ಭಾರತ ತಂಡಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ' ಎಂದು ದಾಸ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
"ನಾನು ವೆಂಕಟೇಶ್ ಅಯ್ಯರ್ ಬಗ್ಗೆ ಹೆಚ್ಚು ಮಾತನಾಡಲು ಬಯಸುತ್ತೇನೆ ಏಕೆಂದರೆ ಅವರು ಬೌಲಿಂಗ್ ಮಾಡುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಗ್ರ ಐದರಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಹುಡುಕಲು ಕಳೆದ 5-7 ವರ್ಷಗಳಿಂದ ಭಾರತ ಕ್ರಿಕೆಟ್ ತಂಡಕ್ಕೆ ಸಾಧ್ಯವಾಗಿಲ್ಲ . ಆದ್ದರಿಂದ ವೆಂಕಟೇಶ್ ಅಯ್ಯರ್ ಅವರಂತಹ ಆಟಗಾರರು ಕೆಲವು ಓವರ್‌ಗಳಲ್ಲಿ ಕೊಡುಗೆ ನೀಡಬಲ್ಲರು' ಎಂದಿದ್ದಾರೆ.