ಐಪಿಎಲ್: ಪ್ಲೇಆಫ್ ಪ್ರವೇಶಿಸಲು ಎಲ್ಲಾ 8 ತಂಡಗಳು ಇಷ್ಟು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಾಗಿದೆ!

ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತದ ನೆಲದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 29 ಪಂದ್ಯಗಳು ಮುಗಿದ ನಂತರ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದಾಗಿ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮುಂದೂಡಲಾಗಿತ್ತು.
ಹೀಗೆ ಮುಂದೂಡಲ್ಪಟ್ಟಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ಯುಎಇಯಲ್ಲಿ ಮುಂದುವರಿಯುತ್ತಿದೆ. ಯುಎಇಯಲ್ಲಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸೆಪ್ಟೆಂಬರ್ 24ರ ಶುಕ್ರವಾರದಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಮುಗಿದ ನಂತರ ಟೂರ್ನಿಯ ಒಟ್ಟು 35 ಪಂದ್ಯಗಳು ಸಂಪೂರ್ಣವಾಗಿ ಮುಗಿದಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಗಿದ ನಂತರ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ 14 ಅಂಕಗಳನ್ನು ಪಡೆಯುವುದರ ಮೂಲಕ ದ್ವಿತೀಯ ಸ್ಥಾನದಲ್ಲಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಅಂಕಗಳನ್ನು ಪಡೆದಿದ್ದು ತೃತೀಯ ಸ್ಥಾನದಲ್ಲಿದೆ ಹಾಗೂ 8 ಅಂಕಗಳನ್ನು ಪಡೆದುಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ 8 ಅಂಕ ಪಡೆದು ಐದನೇ ಸ್ಥಾನದಲ್ಲಿದ್ದು, 8 ಅಂಕಗಳನ್ನು ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ಆರನೇ ಸ್ಥಾನದಲ್ಲಿದೆ, ಪಂಜಾಬ್ ಕಿಂಗ್ಸ್ 6 ಅಂಕಗಳನ್ನು ಪಡೆದಿದ್ದು ಏಳನೇ ಸ್ಥಾನ ಪಡೆದುಕೊಂಡಿದೆ ಮತ್ತು ಒಂದೇ ಒಂದು ಪಂದ್ಯದಲ್ಲಿ ಜಯ ಗಳಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ 2 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹೀಗೆ ಅಂಕಪಟ್ಟಿಯಲ್ಲಿ (ಸೆಪ್ಟೆಂಬರ್ 24ರ ಸಮಯಕ್ಕೆ) ವಿವಿಧ ಸ್ಥಾನಗಳನ್ನು ಪಡೆದುಕೊಂಡಿರುವ ಎಲ್ಲಾ 8 ತಂಡಗಳು ಪ್ಲೇ ಆಫ್ ಪ್ರವೇಶಿಸಲು ಇನ್ನು ಎಷ್ಟು ಪಂದ್ಯಗಳಲ್ಲಿ ಜಯಗಳಿಸಬೇಕಿದೆ ಎನ್ನುವುದರ ಮಾಹಿತಿ ಮುಂದೆ ಇದೆ ಓದಿ..

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೆರಡೂ ತಲಾ 9 ಪಂದ್ಯಗಳನ್ನಾಡಿದ್ದು 7 ಪಂದ್ಯಗಳಲ್ಲಿ ಜಯ ಸಾಧಿಸಿವೆ ಹಾಗೂ 2 ಪಂದ್ಯಗಳಲ್ಲಿ ಮಾತ್ರ ಸೋತಿವೆ ಮತ್ತು ಎರಡೂ ತಂಡಗಳು ಸಹ ತಲಾ 14 ಅಂಕಗಳನ್ನು ಪಡೆದುಕೊಂಡಿವೆ. ನೆಟ್ ರನ್ ರೇಟ್ ಹೆಚ್ಚಾಗಿರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಎರಡೂ ತಂಡಗಳು ಲೀಗ್ ಹಂತದಲ್ಲಿ ಇನ್ನೂ 5 ಪಂದ್ಯಗಳನ್ನು ಆಡಲಿದ್ದು ಪ್ಲೇ ಆಫ್ ಹಂತಕ್ಕೆ ಯಶಸ್ವಿಯಾಗಿ ಪ್ರವೇಶ ಪಡೆಯಲು ಆ 5 ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯಗಳಿಸಿದರೆ ಸಾಕಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್
ಈ ಬಾರಿಯ ಐಪಿಎಲ್ ಟೂರ್ನಿ ಆರಂಭವಾದಾಗ ಸತತ 4 ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಎಇನಲ್ಲಿ ಮುಂದುವರಿದಿರುವ ದ್ವಿತೀಯ ಭಾಗದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಕಂಗೆಟ್ಟಿದೆ. ಇನ್ನು ಟೂರ್ನಿಯಲ್ಲಿ ಇದುವರೆಗೂ 9 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಉಳಿದ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಅತ್ತ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಮಂಕಾಗಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯುಎಇಯಲ್ಲಿ ಮುಂದುವರೆದಿರುವ ದ್ವಿತೀಯ ಭಾಗದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸಾಲಾಗಿ ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಟೂರ್ನಿಯಲ್ಲಿ ಇದುವರೆಗೂ ಒಟ್ಟು 9 ಪಂದ್ಯಗಳನ್ನಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ಪಂದ್ಯಗಳಲ್ಲಿ ಜಯವನ್ನು ಸಾಧಿಸಿದ್ದು ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಮುಂಬರಲಿರುವ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

ರಾಜಸ್ಥಾನ್, ಮುಂಬೈ, ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್
ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಪಡೆದುಕೊಳ್ಳದೇ ಇರುವ ತಂಡಗಳು ಪ್ಲೇ ಆಫ್ ಪ್ರವೇಶವನ್ನು ಮಾಡಬೇಕೆಂದರೆ ಉಳಿದಿರುವ ಪಂದ್ಯಗಳ ಪೈಕಿ ಎಷ್ಟು ಪಂದ್ಯಗಳಲ್ಲಿ ಗೆಲ್ಲಬೇಕು ಎಂಬುದರ ಮಾಹಿತಿ ಈ ಕೆಳಕಂಡಂತಿದೆ..
* ರಾಜಸ್ಥಾನ್ ರಾಯಲ್ಸ್: ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಜಯವನ್ನು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಉಳಿದಿರುವ 6 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
* ಮುಂಬೈ ಇಂಡಿಯನ್ಸ್: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮಂಕಾಗಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಇದುವರೆಗೂ ಒಟ್ಟು 9 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಜಯಗಳಿಸಿದ್ದು ಪ್ಲೇ ಆಫ್ ಹಂತವನ್ನು ಪ್ರವೇಶಿಸಲು ಉಳಿದಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆಯಿದೆ.
* ಪಂಜಾಬ್ ಕಿಂಗ್ಸ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಉಳಿದಿರುವ 5 ಪಂದ್ಯಗಳಲ್ಲಿ ಎಲ್ಲಾ 5 ಪಂದ್ಯಗಳಲ್ಲಿಯೂ ಜಯ ಸಾಧಿಸಬೇಕಿದೆ.
* ಸನ್ ರೈಸರ್ಸ್ ಹೈದರಾಬಾದ್: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಕಳಪೆ ಮಟ್ಟದ ಪ್ರದರ್ಶನವನ್ನು ನೀಡಿ ಈಗಾಗಲೇ ಬಹುತೇಕ ಟೂರ್ನಿಯಿಂದ ಹೊರಬಿದ್ದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಇದುವರೆಗೂ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ್ದು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದ್ದು ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಉಳಿದಿರುವ 6 ಪಂದ್ಯಗಳಲ್ಲಿ ಎಲ್ಲಾ 6 ಪಂದ್ಯಗಳಲ್ಲಿಯೂ ಗೆಲ್ಲುವುದರ ಮೂಲಕ ಚಮತ್ಕಾರವನ್ನೇ ಮಾಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications