
ಅಹ್ಮದಾಬಾದ್: ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸ್ಫೋಟಕ ಅರ್ಧಶತಕದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 5ನೇ ಗೆಲುವು ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 16.3 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 156 ರನ್ ಬಾರಿಸಿ ಗೆಲುವಿನ ನಗು ಚೆಲ್ಲಿತು.
ಕೋಲ್ಕತ್ತಾ ವಿರುದ್ಧದ ಗೆಲುವಿನ ಬಳಿಕ ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನಕ್ಕೇರಿದೆ. ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಕಂಡಿರುವ ಡೆಲ್ಲಿ 10 ಪಾಯಿಂಟ್ಸ್, +0.466 ನೆಟ್ ರನ್‌ರೇಟ್ಸ್‌ನೊಂದಿಗೆ ನಂ.2 ಸ್ಥಾನದಲ್ಲಿದೆ.
ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಪಾಯಿಂಟ್ಸ್, +1.475 ನೆಟ್ ರನ್‌ರೇಟ್ ಗಳಿಸಿದೆ. 3ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, 4ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳಿವೆ.