
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 7 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿದ್ದಾರೆ. ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿಯ ಐಪಿಎಲ್‌ಗಾಗಿ ಗೇಲ್ ಸಿದ್ಧರಾಗಿದ್ದಾರೆ.
'ಯುನಿವರ್ಸಲ್ ಬಾಸ್' ಎಂದು ಕರೆಸಿಕೊಳ್ಳುವ ಕ್ರಿಸ್ ಗೇಲ್, 'ಕಿಂಗ್ ಆಫ್ ಪಾಪ್' ಖ್ಯಾತಿಯ ಮೈಕಲ್ ಜಾಕ್ಸನ್ ಅವರ ಜನಪ್ರಿಯ 'ಸ್ಮೂತ್ ಕ್ರಿಮಿನಲ್' ಸಾಂಗಿಗೆ ಸ್ಟೆಪ್ ಹಾಕಿದ್ದಾರೆ. ಜಾಕ್ಸನ್ ಅವರಂತೆ ಟೋಪಿ ಹಾಕ್ಕೊಂಡು ಹೆಜ್ಜೆ ಹಾಕುವ ಪ್ರಯತ್ನ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ಟ್ವೀಟ್‌ನಲ್ಲಿ ಈ ವಿಡಿಯೋ ಹಾಕಿಕೊಂಡಿದೆ.
ಟ್ವೀಟ್ ಮಾಡಿರುವ ಪಂಜಾಬ್ ಕಿಂಗ್ಸ್, 'ಕ್ವಾರಂಟೈನ್ ಮುಗಿಸಿ ನಿಮ್ಮ ನೆಚ್ಚಿನ ಆಟಗಾರ ಕ್ರಿಸ್ ಗೇಲ್ ಹೊರಗೆ ಬರುತ್ತಿದ್ದಾರೆ' ಎಂದು ಬರೆದುಕೊಂಡಿದೆ. ವೃತ್ತಿಪರ ಕ್ರಿಕೆಟ್ ಆಗಿದ್ದರೂ ಗೇಲ್ ಆಗೀಗ ಮ್ಯೂಸಿಕ್ ವಿಡಿಯೋಗಳನ್ನೂ ಯೂಟ್ಯೂಬ್‌ನಲ್ಲಿ ಹಾಕುತ್ತಿರುತ್ತಾರೆ. ಗೇಲ್ ಹೆಸರಿನಲ್ಲಿ ಸ್ಟುಡಿಯೋ ಕೂಡ ಇದೆ.
ಐಪಿಎಲ್ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿವೆ. ಪಂಜಾಬ್ ಕಿಂಗ್ಸ್‌ಗೆ ಏಪ್ರಿಲ್ 12ರಂದು ಮೊದಲ ಪಂದ್ಯ ನಡೆಯಲಿದೆ. ಏಪ್ರಿಲ್ 12ರಂದು ಮುಂಬೈಯಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ಪಂಜಾಬ್ ಮತ್ತು ರಾಜಸ್ಥಾನ್ ಕಾದಾಡಲಿವೆ.