
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗ ಸದ್ಯ ಯುಎಇಯಲ್ಲಿ ನಡೆಯುತ್ತಿದ್ದು, ಟೂರ್ನಿಯ 43ನೇ ಪಂದ್ಯ ಇಂದು ( ಸೆಪ್ಟೆಂಬರ್ 29 ) ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಒಟ್ಟು 10 ಪಂದ್ಯಗಳನ್ನಾಡಿದ್ದು 6 ಪಂದ್ಯಗಳಲ್ಲಿ ಜಯಗಳಿಸಿ, 4 ಪಂದ್ಯಗಳಲ್ಲಿ ಸೋಲುವುದರ ಮೂಲಕ 12 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ತಂಡ 10 ಪಂದ್ಯಗಳನ್ನಾಡಿದ್ದು 4 ಪಂದ್ಯಗಳಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋಲುವುದರ ಮೂಲಕ 8 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಹೀಗಾಗಿ ಈ ಎರಡೂ ತಂಡಗಳು ಸಹ ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಇಂದಿನ ಪಂದ್ಯದಲ್ಲಿ ಗೆಲ್ಲುವ ಅನಿವಾರ್ಯತೆಯಲ್ಲಿದ್ದವು. ಅದರಲ್ಲಿಯೂ ಪ್ಲೇ ಆಫ್ ಹಂತಕ್ಕೆ ಬಹು ಸಮೀಪದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದಿನ ಪಂದ್ಯವನ್ನು ಗೆದ್ದು ಪ್ಲೇ ಆಫ್ ಹಂತದತ್ತ ಮತ್ತಷ್ಟು ಸನಿಹವಾಗುವ ಯೋಜನೆಯಲ್ಲಿತ್ತು.
ಹೀಗೆ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಕಾಯ್ದುಕೊಳ್ಳುವುದರ ಮೂಲಕ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಿದರು. ಮೊದಲು ಬ್ಯಾಟಿಂಗ್ ಆರಂಭಿಸಿದ ರಾಜಸ್ತಾನ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‍ಗೆ 77 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಎವಿನ್ ಲೆವಿಸ್ 37 ಎಸೆತಗಳಲ್ಲಿ 58 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 22 ಎಸೆತಗಳಲ್ಲಿ 31 ರನ್ ಕಲೆಹಾಕಿ ನಿರ್ಗಮಿಸಿದರು.
ಹೀಗೆ ಉತ್ತಮ ಆರಂಭವನ್ನು ಕಟ್ಟುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರಂಭದಲ್ಲಿ ಹಿಡಿತವನ್ನು ಸಾಧಿಸಿದ್ದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರರ ವಿಕೆಟ್‍ಗಳನ್ನು ಕಳೆದುಕೊಂಡ ನಂತರ ನಿಧಾನಗತಿಯ ಆಟವನ್ನು ಆಡಲು ಶುರುಮಾಡಿತು. 14ನೇ ಓವರ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಶಹಬಾಜ್ ಅಹ್ಮದ್ ಒಂದೇ ಓವರ್‌ನಲ್ಲಿ 2 ವಿಕೆಟ್ ( ಸಂಜು ಸ್ಯಾಮ್ಸನ್ ಮತ್ತು ರಾಹುಲ್ ತೆವಾಟಿಯಾ) ಪಡೆದುಕೊಳ್ಳುವುದರ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಒತ್ತಡವನ್ನೇರಿದರು.
ಆರಂಭಿಕ ಆಟಗಾರರ ವಿಕೆಟ್ ಪತನವಾದ ನಂತರ ಕಣಕ್ಕಿಳಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 19, ಮಹಿಪಾಲ್ ಲೊಮ್ರಾರ್ 3, ಲಿಯಾಮ್ ಲಿವಿಂಗ್‌ಸ್ಟನ್ 6, ರಾಹುಲ್ ತೆವಾಟಿಯಾ 2, ರಿಯಾನ್ ಪರಾಗ್ 9, ಕ್ರಿಸ್ ಮೊರಿಸ್ 14, ಚೇತನ್ ಸಕಾರಿಯಾ 2 ಮತ್ತು ಕಾರ್ತಿಕ್ ತ್ಯಾಗಿ ಅಜೇಯ 1 ರನ್ ಗಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಹರ್ಷಲ್ ಪಟೇಲ್ 3, ಶಹಬಾಜ್ ಅಹ್ಮದ್ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್‍ಗಳನ್ನು ಪಡೆದರೆ, ಜಾರ್ಜ್ ಗಾರ್ಟನ್ ಮತ್ತು ಡೇನಿಯಲ್ ಕ್ರಿಸ್ಟಿಯನ್ ತಲಾ 1 ವಿಕೆಟ್ ಪಡೆದರು. ಹೀಗೆ ಆರಂಭದಲ್ಲಿ ಅಬ್ಬರಿಸಿ 180 ರನ್‌ಗಳ ಗಡಿ ದಾಟುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 150 ರನ್‌ಗಳ ಗುರಿಯನ್ನು ನೀಡಿದೆ.