
ಐಪಿಎಲ್ 14ನೇ ಆವೃತ್ತಿಯ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಸಾಕಷ್ಟು ಕಾತುರತೆಯಿಂದ ಕಾಯುತ್ತಿರುವ ಮಹತ್ವದ ಟೂರ್ನಿಗೆ ವಿರಾಟ್ ಕೊಹ್ಲಿ ಪಡೆ ಸಂಪೂರ್ಣವಾಗಿ ಸಜ್ಜಾಗಿದೆ. ಮೊದಲ ಪಂದ್ಯದ ಸೆಣೆಸಾಟದ ಮೂಲಕ 14ನೇ ಆವೃತ್ತಿಯ ಅಭಿಯಾನ ಆರಂಭಿಸುವ ಮುನ್ನ ನಾಯಕ ಕೊಹ್ಲಿ ಆರ್‌ಸಿಬಿ ತಂಡದ ಸದಸ್ಯರನ್ನು ಉದ್ದೇಶಿಸಿ ಸ್ಪೂರ್ತಿಯ ಮಾತುಗಳನ್ನು ಆಡಿದ್ದಾರೆ.
ಆರ್‌ಸಿಬಿ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ನಾಯಕ ವಿರಾಟ್ ಕೊಹ್ಲಿ ತಂಡದ ಎಲ್ಲಾ ಸದಸ್ಯರಿಗೆ ಪೆಪ್ ಟಾಕ್ ನೀಡುತ್ತಿದ್ದಾರೆ. ಈ ಮೂಲಕ ಮೊದಲ ಪಂದ್ಯಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಮಾತಿನಲ್ಲಿ ಆಟಗಾರರಿಗೆ ಮತ್ತಷ್ಟು ಹುರುಪು ತುಂಬುವ ಪ್ರಯತ್ನ ಮಾಡಿದ್ದಾರೆ.
"ನಮ್ಮೊಂದಿಗೆ ಸೇರಿಕೊಂಡ ಎಲ್ಲಾ ಹೊಸ ಹುಡುಗರಿಗೆ, ಈ ಅದ್ಭುತ ಗುಂಪಿಗೆ ಸ್ವಾಗತ" ಎಂದು ವಿರಾಟ್ ಕೊಹ್ಲಿ ಮಾತನ್ನು ಆರಂಭಿಸಿದ್ದಾರೆ. "ಈ ಹಿಂದೆ ಇಲ್ಲಿ ಆಡಿದ ಹುಡುಗರಿಂದ ನಿಮಗೆ ತಿಳಿದಿರುವಂತೆ, ವಾತಾವರಣ, ಋತುವಿನ ಉದ್ದಕ್ಕೂ ಶಕ್ತಿಯು ಅದ್ಭುತವಾಗಿರುತ್ತದೆ. ಆದರೆ ನಾನು ಎಲ್ಲರಿಂದ ನಿರೀಕ್ಷಿಸುವುದು ಏನೆಂದರೆ ಮೈದಾನದಲ್ಲಿ ಅತಿ ಹೆಚ್ಚು ಸಮಯಗಳನ್ನು ನಾವು ಕಳೆಯಬೇಕು. ಅದು ಅಭ್ಯಾಸದ ಶಿಬಿರದಲ್ಲಾಗಿರಲಿ ಅಥವಾ ಆಟದ ಡ್ರಿಲ್‌ಗಳಾಗಿರಬಹುದು" ಎಂದಿದ್ದಾರೆ ವಿರಾಟ್ ಕೊಹ್ಲಿ.
"ಆಟಗಾರರಿಂದ ನಾನು ನಿರೀಕ್ಷಿಸುವ ಮತ್ತೊಂದು ಸಂಗತಿಯೆಂದರೆ ತೀವ್ರತೆಯಿಂದ ಆಡಬೇಕು. ಅದು ನಾವು ಯಾವಾಗಲೂ ಆಡಿದ ರೀತಿ ಮತ್ತು ಅದು ಬದಲಾಗುವುದಿಲ್ಲ" ಎಂದು ತಂಡದ ಸದಸ್ಯರಿಗೆ ನಾಯಕ ವಿರಾಟ್ ಕೊಹ್ಲಿ ಕಿವಿ ಮಾತನ್ನು ಹೇಳಿದ್ದಾರೆ.
ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು ಆರಂಭಿಕ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.