ಐಪಿಎಲ್ 2021: ಚೊಚ್ಚಲ ಹಣಾಹಣಿಯಲ್ಲಿ ಮುಂಬೈ vs ಆರ್‌ಸಿಬಿ, ಪಂದ್ಯದ ಗತಿ ಬದಲಿಸಬಲ್ಲ 6 ಆಟಗಾರರು!

ಈ ಬಾರಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಸವಾಲೊಡ್ಡಲಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಕೆಲ ಕುತೂಹಲಕಾರಿ ಬದಲಾವಣೆಗಳು ಆಗಿದ್ದು ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಭಾರತ ರಾಷ್ಟ್ರೀಯ ತಂಡದ ನಾಯಕ ಹಾಗೂ ಉಪನಾಯಕರು ಮುನ್ನಡೆಸುತ್ತಿರುವ ತಂಡಗಳು ಮುಖಾಮುಖಿಯಾಗಿರುವುದು ಪಂದ್ಯದ ಮೇಲಿನ ಕುತೂಹಲ ಹೆಚ್ಚಾಗುವುದಕ್ಕೆ ಮತ್ತೊಂದು ಅಂಶವಾಗಿದೆ. ಈ ಎರಡು ತಂಡಗಳು ಕೂಡ ಸಾಕಷ್ಟು ಬಲಾಢ್ಯ ಹಾಗೂ ಕೌಶಲ್ಯಯುತವಾದ ಆಟಗಾರರ ಪಡೆಯನ್ನು ಹೊಂದಿದೆ.
ಹಾಗಾದರೆ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಫಲಿತಾಂಶದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಆರು ಆಟಗಾರರ ಪಟ್ಟಿ ಇಲ್ಲಿದೆ ನೋಡಿ..

ಕಿರಾನ್ ಪೊಲಾರ್ಡ್
ವೆಸ್ಟ್ ಇಂಡೀಸ್‌ನ ಈ ಬಲಿಷ್ಠ ಆಟಗಾರ ಈ ಬಾರಿಯ ಆವೃತ್ತಿಗೆ ಮುನ್ನ ಅಬ್ಬರಿಸಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಪೊಲಾರ್ಡ್ ಒಂದು ಓವರ್‌ನ ಎಲ್ಲಾ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿ ದಾಖಲೆಯನ್ನು ಮಾಡಿದ್ದರು. ಅದೇ ಫಾರ್ಮ್‌ನಲ್ಲಿ ಈಗ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಪಂದ್ಯದ ಕಡೇಯ ಘಳಿಗೆಯಲ್ಲಿ ಫಲಿತಾಂಶವನ್ನು ತನ್ನ ತಂಡದ ಪರವಾಗಿ ಮಾಡುವ ಸಾಮರ್ಥ್ಯವನ್ನು ಪೊಲಾರ್ಡ್ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಹಾಗೂ ಟೀಮ್ ಇಂಡಿಯಾ ಪರವಾಗಿ ಸಾಕಷ್ಟು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಪಾಂಡ್ಯ ಅದ್ಭುತ ಇನ್ನಿಂಗ್ಸ್‌ಗಳನ್ನು ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು. ಸ್ಪೋಟಕ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಮಿಂಚಬಲ್ಲ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿಯೂ ಆರ್‌ಸಿಬಿ ತಂಡಕ್ಕೆ ಕಂಟಕವಾಗಬಲ್ಲರು.

ಸೂರ್ಯಕುಮಾರ್ ಯಾದವ್
ಕಳೆದ ಕೆಲ ಐಪಿಎಲ್ ಆವೃತ್ತಿಗಳಲ್ಲಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡ ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಾಕಷ್ಟು ಆತ್ಮವಿಶ್ವಾಸದೊಂದಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. 3ನೇ ಕ್ರಮಾಂಕದಲ್ಲಿ ಅಥವಾ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸೂರ್ಯಕುಮಾರ್ ಅಗತ್ಯಕ್ಕೆ ತಕ್ಕನಾದ ರೀತಿಯಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಎಬಿ ಡಿವಿಲಿಯರ್ಸ್
ಆರ್‌ಸಿಬಿ ತಂಡದ ಅನುಭವಿ ಆಟಗಾರ ಎಬಿ ಡಿ ವಿಲಿಯರ್ಸ್ ಸುದೀರ್ಘ ಕಾಲದಿಂದ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ತಮ್ಮ ಅತ್ಯದ್ಭುತ ಆಟದ ಮೂಲಕ ಎದುರಾಳಿ ಹಾಗೂ ಅಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿಸುವ ಶಕ್ತಿ ದಕ್ಷಿಣ ಆಫ್ರಿಕಾ ಮೂಲದ ಈ ಆಟಗಾರನಿಗೆ ಇದೆ. ಇವರು ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ನಡುವಿನ ಸೇತುವೆಯಾಗಿ ಅತ್ಯುತ್ತಮವಾಗಿ ತಂಡಕ್ಕೆ ನೆರವಾಗುತ್ತಾರೆ.

ದೇವದತ್ ಪಡಿಕ್ಕಲ್
ಕನ್ನಡಿಗ ದೇವದತ್ ಪಡಿಕ್ಕಲ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆರಂಭಿಕನಾಗಿ ಉತ್ತಮ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು. ಇತ್ತೀಚೆಗಷ್ಟೇ ಅಂತ್ಯವಾದ ವಿಜಯ್ ಹಜಾರೆ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿದ ಪಡಿಕ್ಕಲ್ ಈ ಫಾರ್ಮ್‌ಅನ್ನು ಐಪಿಎಲ್‌ನಲ್ಲಿಯೂ ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ವೈರಸ್‌ಗೆ ತುತ್ತಾಗಿದ್ದ ಪಡಿಕ್ಕಲ್ ಈಗ ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಪಡಿಕ್ಕಲ್ ಆಡುವ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿಗಳು ಲಭ್ಯವಾಗಬೇಕಿದೆ.

ಗ್ಲೆನ್ ಮ್ಯಾಕ್ಸ್‌ವೆಲ್
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಆಸ್ಟ್ರೇಲಿಯಾದ ಈ ಆಟಗಾರ ಯಾವತ್ತಿಗೂ ಅಪಾಯಕಾರಿ ಎಂಬುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದಿರುವ ಸಂಗತಿ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಸ್ಪೋಟಕವಾಗಿ ಬ್ಯಾಟಿಂಗ್ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಅದ್ಭುತವಾದ ಕೊಡುಗೆ ನೀಡಬಲ್ಲವರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications