
ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದ್ದ ಮುಂಬೈ ಇಂಡಿಯನ್ಸ್ ಕೊನೆಯ ಹಂತದಲ್ಲಿ ಮೈಕೊಡವಿ ನಿಂತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಆರ್‌ಆರ್ ನೀಡಿದ್ದ 91 ರನ್‌ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 8.2 ಓವರ್‌ಗಳಲ್ಲಿ ತಲುಪಿ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿರುವ ಮುಂಬೈ ಇಂಡಿಯನ್ಸ್ ಅಂತಿಮ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದೆ ಎಂದಿದ್ದಾರೆ.
ಪ್ಲೇಆಫ್‌ಗೇರಲು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಣ್ಣಿಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸದ್ಯ 13 ಪಂದ್ಯಗಳನ್ನು ಆಡಿದ್ದು ಎರಡು ತಂಡಗಳು ಕೂಡ 12 ಅಂಕಗಳನ್ನು ಗಳಿಸಿಕೊಂಡಿದೆ. ಎರಡು ತಂಡಗಳಿಗೂ ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಂತಿಮ ಪಂದ್ಯವನ್ನು ಆಡಲಿದ್ದರೆ ಮುಂಬೈ ಇಂಡಿಯನ್ಸ್‌ಗೆ ಕೊನೆಯ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಪ್ಲೇಆಫ್ ಹಂತಕ್ಕೇರಲು ಈ ಎರಡು ಪಂದ್ಯಗಳ ಫಲಿತಾಂಶ ಕೂಡ ಪ್ರಮುಖವಾಗಿದ್ದು ಯಾವ ಒಂದು ತಂಡ ಸೋತರು ಆ ತಂಡ ಪ್ಲೇಆಫ್‌ನಿಂದ ಹೊರಬೀಳಲಿದೆ.
ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್‌ಗೇರಬೇಕಾದರೆ ಸ್ವತಃ ಮುಂಬೈ ಇಂಡಿಯನ್ಸ್ ಗೆಲ್ಲುವ ಜೊತೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಮುಂದಿನ ಪಂದ್ಯದಲ್ಲಿ ಸೋಲಬೇಕಾದ ಪರಿಸ್ಥಿತಿಯಿದೆ. ಯಾಕೆಂದರೆ ಕೆಕೆಆರ್ ನೆಟ್‌ರನ್‌ರೇಟ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಮುಂದಿರುವುದು ಕೆಕೆಆರ್‌ಗೆ ಸಣ್ಣ ಮೇಲುಗೈ ಒದಗಿಸಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೆ ಮುಂಬೈ ಇಂಡಿಯನ್ಸ್‌ನ ಅಂತಿಮ ಪಂದ್ಯದ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆ ತೀರಾ ಕಡಿಮೆಯಿದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಮಾತನಾಡುತ್ತಾ ಮುಂದಿನ ಪಂದ್ಯದಲ್ಲಿ ತಂಡದ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ. "ಈ ಟೂರ್ನಮೆಂಟ್‌ನಲ್ಲಿ ಎಲ್ಲಾ 8 ತಂಡಗಳು ಕೂಡ ಮತ್ತೊಂದು ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂತಿಮ ಪಂದ್ಯದಲ್ಲಿ ನಾವು ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇವೆ. ಒಳ್ಳೆಯ ಸಂಗತಿಯೆಂದರೆ ಕೆಕೆಆರ್ ನಮಗಿಂತ ಮುನ್ನ ಆಡಲಿದೆ. ಹೀಗಾಗಿ ಅಂತಿಮ ಹಂತದಲ್ಲಿ ನಾವೇನು ಮಾಡಬೇಕೆಂಬುದು ನಮಗೆ ಸ್ಪಷ್ಟವಾಗಿರುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕಿರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಟ್ರೆಂಟ್ ಬೌಲ್ಟ್
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಇವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಕುಲ್ದಿಪ್ ಯಾದವ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ