ಪಡಿಕ್ಕಲ್ ಸ್ಪೋಟಕ ಆಟ
ಈ ಬಾರಿಯ ಆವೃತ್ತಿಯಲ್ಲಿ ಸ್ವಲ್ಪ ಮಂಕಾದಂತೆ ಕಂಡು ಬಂದಿದ್ದ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸಹಜ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು. 52 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 101 ರನ್ ಬಾರಿಸಿ ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಈ ಸುಂದರ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡಿತ್ತು.
ನಾಯಕನ ಆಟವಾಡಿದ ಕೊಹ್ಲಿ
ಇನ್ನು ನಾಯಕ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನವಾಗಿ ಆಡುತ್ತಾ ದೇವದತ್ ಪಡಿಕ್ಕಲ್ ಜೊತೆಗೆ ಇನ್ನಿಂಗ್ಸ್ ಕಟ್ಟಿದರು. ನಂತರ ರನ್ಗಳಿಸುವ ವೇಗವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಂಗು ತುಂಬಿದರು. 47 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 72 ರನ್ಗಳಿಸಿದರು. ಇದರಲ್ಲಿ ಆರು ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು.
6000 ರನ್ ಸರದಾರ ಕೊಹ್ಲಿ
ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ನ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 6000ರನ್ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ವೈಯಕ್ತಿಕ ಮೊತ್ತ 51 ರನ್ಗಳಿಸಿದ್ದ ವೇಳೆ ಈ ಮೈಲಿಗಲ್ಲನ್ನು ಕೊಹ್ಲಿ ದಾಟಿದರು.
10 ವಿಕೆಟ್ಗಳ ಗೆಲುವು
ಆರ್ಸಿಬಿ ಆರಂಭಿಕರ ಈ ಅಜೇಯ ಜೊತೆಯಾಟದಿಂದಾಗಿ ಸುಲಭವಾಗಿ ವಿರಾಟ್ ಪಡೆ ಗೆಲುವು ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 178 ರನ್ಗಳ ಗುರಿಯನ್ನು ವಿರಾಟ್ ಪಡೆ 16.3 ಓವರ್ಗಳಲ್ಲಿ ತಲುಪುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದೆ.
178 ರನ್ಗಳ ಸವಾಲು ನೀಡಿದ್ದ ಆರ್ಆರ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 177 ರನ್ಗಳನ್ನು ಗಳಿಸಿತು. ಆರಂಭದಲ್ಲಿ ದೊಡ್ಡ ಕುಸಿತವನ್ನು ಕಂಡ ಸ್ಯಾಮ್ಸನ್ ಬಳಗ ಬಳಿಕ ಚೇತರಿಕೆಯನ್ನು ಕಾಣುವಲ್ಲಿ ಯಶಸ್ವಿಯಾಗಿದ್ದಲ್ಲದೆ ಸವಾಲಿನ ಮೊತ್ತವನ್ನು ಪೇರಿಸಿತು.