ಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ

ಅಬುಧಾಬಿ, ಅಕ್ಟೋಬರ್ 3: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗ ಸಿಎಸ್‌ಕೆ ನೀಡಿದ್ದ ಬೃಹತ್ ಮೊತ್ತದ ಗುರಿಯನ್ನು ಸುಲಭವಾಗಿ ತಲುಪಿ ಭರ್ಜರಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಪ್ರತಿಕ್ರಿಯಿಸಿದರು. ಈ ಪಂದ್ಯವನ್ನು ತಮ್ಮ ತಂಡದ ಆರಂಭಿಕ ಜೋಡಿಯಾದ ಯಶಸ್ವಿ ಜೈಸ್ವಾಲ್ ಹಾಗೂ ಇವಿನ್ ಲೂಯಿಸ್ ಜೋಡಿ ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು ಎಂದಿದ್ದಾರೆ ಆರ್‌ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 189 ರನ್‌ಗಳನ್ನು ಗಳಿಸಿತ್ತು. ಸಿಎಸ್‌ಕೆ ಪರವಾಗಿ ಯುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಭರ್ಜರಿ ಶತಕವನ್ನು ಸಿಡಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಸಿಎಸ್‌ಕೆ ಪರವಾಗಿ ರವೀಂದ್ರ ಜಡೇಜಾ 25 ಎಸೆತಗಳಲ್ಲಿ 32 ರನ್‌ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ ಚೆನ್ನೈ ನಾಲ್ಕು ವಿಕೆಟ್ ಕಳೆದುಕೊಂಡು ಈ ಮೊತ್ತವನ್ನು ಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಇವಿನ್ ಲೂಯಿಸ್ ಜೋಡಿ ಆರಂಭದಿಂದಲೇ ಅಬ್ಬರಿಸಲು ಆರಂಭಿಸಿದ್ದರು. ಕೇವಲ 5 ಓವರ್‌ಗಳಲ್ಲಿ ಈ ಜೋಡಿ ಭರ್ಜರಿ 77 ರನ್‌ಗಳಿಸಿತ್ತು. 12 ಎಸೆತಗಳನ್ನು ಎದುರಿಸಿದ ಲೂಯಿಸ್ 27 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತ್ತು.

ಚೆನ್ನೈಗೆ ಆಘಾತ ನೀಡಿದ ಯಶಸ್ವಿ ಜೈಸ್ವಾಲ್
ಚೆನ್ನೈ ಸೂಪರ್ ಕಿಂಗ್ಸ್‌ಗೆ ಲೂಯಿಸ್‌ಗಿಂತಲೂ ಹೆಚ್ಚಿನ ಆಘಾತ ನೀಡಿದ್ದು ಯುವ ಆಟಗಾರ ಯಶಸ್ವಿ ಜೈಸ್ವಾಲ್. ಕೇವಲ 19 ಎಸೆತಗಳಲ್ಲಿ ಜೈಸ್ವಾಲ್ ಅರ್ಥ ಶತಕವನ್ನು ಪೂರ್ಣಗೊಳಿಸಿದ್ದರು. ಒಟ್ಟು 21 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 6 ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಚೆನ್ನೈ ತಂಡ ನೀಡಿದ್ದ ಬೃಹತ್ ಗುರಿಯನ್ನು ಈ ಜೋಡಿ ಸುಲಭವಾಗಿಸಿದ್ದರು. ಅಂತಿಮ ಹಂತದಲ್ಲಿ ಶಿವಂ ದುಬೆ ಐಪಿಎಲ್‌ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಕಟ್ಟಿ ತಂಡವನ್ನು ಗೆಲ್ಲಿಸಿದರು. ಶಿವಂ ದುಬೆ 42 ಎಸೆತಗಳಲ್ಲಿ ಅಜೇಯ 64 ರನ್‌ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಮುಕ್ತಕಂಠದಿಂದ ಪ್ರಶಂಸಿಸಿದ ನಾಯಕ
ಆರಂಭಿಕ ಜೋಡಿಯಾದ ಜೈಸ್ವಾಲ್ ಹಾಗೂ ಲೂಯಿಸ್ ಪ್ರದರ್ಶನಕ್ಕೆ ನಾಯಕ ಸಂಜು ಸ್ಯಾಮ್ಸನ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. "ನಮ್ಮ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿರುವ ಆಟಗಾರರ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದೆ. ಅದೇ ಕಾರಣಕ್ಕೆ ನಾವು ಸೋಲು ಕಂಡಾಗ ನಿರಾಶರಾಗೊದ್ದೆವು. ಕೊನೆಯ ಮೂರ್ನಾಲ್ಕು ಓವರ್‌ಗಳಲ್ಲಿ ಪಿಚ್ ತುಂಬಾ ಚೆನ್ನಾಗಿ ವರ್ತಿಸಿತ್ತು. ಹಾಗಾಗಿಯೇ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಡೆಸಲು ಉತ್ತಮ ಎಂಬುದನ್ನು ನಾವು ನಿರ್ಧರಿಸಿದ್ದೆವು" ಎಂದಿದ್ದಾರೆ ಸಂಜು ಸ್ಯಾಮ್ಸನ್.

ಪವರ್‌ಪ್ಲೇನಲ್ಲಿಯೇ ಪಂದ್ಯ ಮುಗಿಸಿದ್ದರು
"ನಮ್ಮ ಆರಂಭಿಕರು ಉತ್ತಮ ಆರಂಭವನ್ನು ನೀಡಿದ್ದರು. ಅವರಿಬ್ಬರು ಪವರ್‌ಪ್ಲೇನಲ್ಲಿಯೇ ಪಂದ್ಯವನ್ನು ಬಹುತೇಕ ಮುಗಿಸಿದ್ದರು. ಅವರಿಬ್ಬರು ಎದುರಾಳಿಗಳನ್ನು ಮುಗಿಸಲೆಂದೇ ಕಣಕ್ಕಿಳಿದಿದ್ದರು" ಎಂದು ಸಂಜು ಸ್ಯಾಮ್ಸನ್ ಪಂದ್ಯದ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. "ಜೈಸ್ವಾಲ್ ನೀಡಿದ ಪ್ರದರ್ಶನಕ್ಕೆ ತುಂಬಾ ಸಂತಸಗೊಂಡಿದ್ದೇನೆ. ಈ ಬಾರಿಯ ಟೂರ್ನಿಯುದ್ದಕ್ಕೂ ಆತನಿಂದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಬಂದಿದೆ. ಖಂಡಿತಾ ಆತನಿಂದ ಮತ್ತಷ್ಟು ದೊಡ್ಡ ಪ್ರದರ್ಶನಗಳು ಬರಲಿದೆ" ಎಂದಿದ್ದಾರೆ ಸಂಜು ಸ್ಯಾಮ್ಸನ್. ಇನ್ನು ಇದೇ ಸಂದರ್ಭದಲ್ಲಿ ಸಂಜು ಶಿವಂ ದುಬೆ ನೀಡಿದ ಪ್ರದರ್ಶನವನ್ನು ಕೂಡ ಕೊಂಡಾಡಿದ್ದಾರೆ.

ಸಂಕ್ಷಿಪ್ತ ಸ್ಕೋರ್ ಹೀಗಿದೆ
ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 189/4 (ಋತುರಾಜ್ ಗಾಯಕ್ವಾಡ್ 101* ರವೀಂದ್ರ ಜಡೇಜಾ 32*, ಫಾಫ್ ಡುಪ್ಲೆಸಿಸ್ 25; ರಾಹುಲ್ ತೆವಾಟಿಯ 39ಕ್ಕೆ 3, ಚೇತನ್ ಸಕಾರಿಯ 31ಕ್ಕೆ 1)
ರಾಜಸ್ಥಾನ್ ರಾಯಲ್ಸ್: 17.3 ಓವರ್‌ಗಳಲ್ಲಿ 190/3 (ಶಿವಂ ದುಬೆ 64*, ಯಶಸ್ವಿ ಜೈಸ್ವಾಲ್ 50, ಸಂಜು ಸ್ಯಾಮ್ಸನ್ 28, ಎವಿನ್ ಲೆವಿಸ್ 27, ; ಶಾರ್ದುಲ್ ಠಾಕೂರ್ 30ಕ್ಕೆ 2, ಕೆ.ಎಂ ಆಸಿಫ್ 18ಕ್ಕೆ 1)
ಉಭಯ ತಂಡಗಳ ಆಡುವ ಬಳಗ: ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದುಲ್ ಠಾಕೂರ್, ಕೆ.ಎಂ ಆಸಿಫ್, ಜೋಶ್ ಹೇಜಲ್‌ವುಡ್
ರಾಜಸ್ಥಾನ್ ರಾಯಲ್ಸ್: ಎವಿನ್ ಲೆವಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್ ), ಶಿವಂ ದುಬೆ, ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ಆಕಾಶ್ ಸಿಂಗ್, ಮಯಾಂಕ್ ಮಾರ್ಕಂಡೆ, ಚೇತನ್ ಸಕಾರಿಯ, ಮುಸ್ತಾಫಿಝುರ್ ರೆಹಮಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications