
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ಗೆ ಶನಿವಾರ (ಆಗಸ್ಟ್ 21) ಪ್ರಯಾಣಿಸಿದೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಯುಎಇಯಲ್ಲಿ ಐಪಿಎಲ್ ಶುರುವಾಗಲಿದೆ. ಡಿಸಿ ಎಂದಿನ ನಾಯಕ ಶ್ರೇಯಸ್ ಐಯ್ಯರ್ ಗಾಯದಿಂದ ಚೇತರಿಸಿಕೊಂಡಿದ್ದು, ಐಪಿಎಲ್ ದ್ವಿತೀಯ ಹಂತದಲ್ಲಿ ತಂಡ ಮುನ್ನಡೆಸುವ ನಿರೀಕ್ಷೆಯಿದೆ. ಆರಂಭಿಕ ಹಂತದಲ್ಲಿ ಐಯ್ಯರ್ ತಂಡದಿಂದ ಹೊರಗಿದ್ದಿದ್ದರಿಂದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ತಂಡ ಮುನ್ನಡೆಸಿದ್ದರು.
ಭಾರತದಲ್ಲಿ ಏಪ್ರಿಲ್ 9ರಿಂದ ನಡೆದಿದ್ದ ಐಪಿಎಲ್ 2021ರ ಮೊದಲ ಹಂತದ ಪಂದ್ಯಗಳು ಕೋವಿಡ್ ಭೀತಿಯಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟವು. ಐಪಿಎಲ್ ಫ್ರಾಂಚೈಸಿಗಳಲ್ಲೂ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಂದಿತ್ತು.
ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಯುಎಇ ಪ್ರಯಾಣದ ಮಾಹಿತಿ
ಶನಿವಾರ (ಆಗಸ್ಟ್ 21) ಇನ್‌ಸ್ಟಾಗ್ರಾಮ್ ವಿಡಿಯೋ ಹಾಕಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುಎಇಗೆ ಪ್ರಯಾಣಿಸುತ್ತಿರುವ ಸಂಗತಿ ತಿಳಿಸಿತ್ತು. 'ಫಿರ್ ಸೆ ಉದ್ ಚಲಾ 2.0, ನಾವು ಯುಎಇಗೆ ಹೊರಡುತ್ತಿದ್ದೇವೆ' ಎಂದು ಪೋಸ್ಟ್‌ನಲ್ಲಿ ತಿಳಿಸಿತ್ತು. ಇದಕ್ಕೂ ಮೊದಲೇ ಎಎನ್‌ಎ ನ್ಯೂಸ್ ಏಜೆನ್ಸಿ ಡೆಲ್ಲಿ ಮೂಲದ ಫ್ರಾಂಚೈಸಿ ಶನಿವಾರ ಐಪಿಎಲ್‌ಗಾಗಿ ಯುಎಇಗೆ ತೆರಳಿಲಿದೆ ಎಂದು ಮಾಹಿತಿ ನೀಡಿತ್ತು. ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಶ್ರೇಯಸ್ ಐಯ್ಯರ್ ಈಗಾಗಲೇ ಯುಎಇಯಲ್ಲಿ ತನ್ನ ಫಿಟ್ನೆಸ್ ಕೋಚ್ ಜೊತೆಗಿದ್ದು, ಶೀಘ್ರದಲ್ಲೇ ತಂಡದ ಉಳಿದ ಆಟಗಾರನ್ನು ಸೇರಿಕೊಳ್ಳಲಿದ್ದಾರೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಯುಎಇ ತಲುಪಿ ಅಭ್ಯಾಸ ಆರಂಭಿಸಿದೆ. ಕಳೆದ ವಾರವೇ ಎರಡೂ ತಂಡಗಳು ಯುಎಇಗೆ ಪ್ರಯಾಣಿಸಿದ್ದವು.
ಉತ್ತಮ ಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್
ಹಿಂದಿನ ಸೀಸನ್‌ನಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್‌ನಲ್ಲೂ ಉತ್ತಮ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋತು 12 ಪಾಯಿಂಟ್ಸ್ ಕಲೆ ಹಾಕಿದೆ. ಅಂಕಪಟ್ಟಿಯಲ್ಲಿ ಸದ್ಯ ಡೆಲ್ಲಿ ನಂ.1 ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ. ಐಪಿಎಲ್ ದ್ವಿತೀಯ ಹಂತದಲ್ಲಿ ಡೆಲ್ಲಿ ಸೆಪ್ಟೆಂಬರ್ 22ರಂದು ಸನ್ ರೈಸರ್ಸ್ ಹೈದರಾಬಾದ್ ಸವಾಲು ಸ್ವೀಕರಿಸಲಿದೆ. ಭಾರತೀಯ ಕಾಲಮಾನ 7.30 PMಗೆ ಪಂದ್ಯ ಶುರುವಾಗಲಿದೆ. ಐಪಿಎಲ್‌ನಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ಮೂರು ತಂಡಗಳ ಸಾಲಿನಲ್ಲಿ ಡೆಲ್ಲಿಯೂ ಇದೆ. ವಿಶೇಷವೆಂದರೆ ಡಿಸಿ ಫೈನಲ್ ಪಂದ್ಯ ಆಡಿದ್ದೇ ಕಳೆದ ಸೀಸನ್‌ನಲ್ಲಿ. ಆದರೆ ಬಲಿಷ್ಠ ಮುಂಬೈ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಕಪ್ ಗೆಲ್ಲದ ಇನ್ನೆರಡು ತಂಡಗಳೆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್.
ಐಪಿಎಲ್ ದ್ವಿತೀಯ ಪಂದ್ಯಗಳು ಶುರು ಯಾವಾಗ?
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಆರ್‌ಸಿಬಿಗೆ ಸೆಪ್ಟೆಂಬರ್ 20ರಂದು ಮೊದಲ ಪಂದ್ಯವಿದ್ದು, ಆವತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ.
60 ಶೇಕಡಾ ಪ್ರೇಕ್ಷಕರಿಗೆ ಯುಎಇ ಗ್ರೀನ್ ಸಿಗ್ನಲ್
ಐಪಿಎಲ್ ಆರಂಭಿಕ ಹಂತದಲ್ಲಿ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಿರಲಿಲ್ಲ. ಆದರೆ ದ್ವಿತೀಯ ಹಂತಕ್ಕೆ ವೀಕ್ಷಕರಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಲು ಯುಎಇ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. "ಆತಿಥೇಯರಾಗಿ, ಪ್ರೇಕ್ಷರಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡುವುದಕ್ಕೂ ಮುನ್ನ ಯಾವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂಬುದರ ಕುರಿತು ಅನುಮೋದನೆ ಪಡೆಯಲು ಅಧಿಕಾರಿಗಳೊಂದಿಗೆ ಇಸಿಬಿ ನಿಕಟವಾಗಿ ಕೆಲಸ ಮಾಡುತ್ತಿದೆ. ಇಲ್ಲಿ ಚರ್ಚಿಸಲಾಗುತ್ತಿರುವ ವಿಚಾರ ಸ್ಟೇಡಿಯಂಗೆ ವೀಕ್ಷಕರ ಪ್ರವೇಶಕ್ಕೆ ಸಂಬಂಧಿಸಿದ್ದಾಗಿದೆ. ನಾವು ಅದನ್ನು ಬಿಸಿಸಿಐ ಹಾಗೂ ಐಸಿಸಿಯೊಂದಿಗೆ ಚರ್ಚಿಸಿ ಅವರ ಪ್ರೇಕ್ಷಕರ ಅಗತ್ಯತೆಗಳನ್ನು ನಿರ್ಣಯಿಸುತ್ತೇವೆ. ಯುಎಇಯಲ್ಲಿರುವ ನಮ್ಮ ವಲಸಿಗರು ಮತ್ತು ಎಮಿರಾಟಿ ಕ್ರೀಡೆಯನ್ನು ಪ್ರೀತಿಸುವ ಅಭಿಮಾನಿಗಳು ಸ್ಟ್ಯಾಂಡ್‌ನಿಂದ ಈ ಕ್ರಮವನ್ನು ವೀಕ್ಷಿಸಬೇಕೆಂದು ನಾವು ಬಯಸುತ್ತಿದ್ದೇವೆ,"ಎಂದು ಉಸ್ಮಾನಿ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಯುಎಇ ಸರ್ಕಾರ ಐಪಿಎಲ್ ವೇಳೆ 60 ಶೇ. ವೀಕ್ಷಕರಿಗೆ ಸ್ಟೇಡಿಯಂ ಒಳಗೆ ಅನುಮತಿ ನೀಡಲು ಗ್ರೀನ್ ಸಿಗ್ನಲ್ ನೀಡಿದೆ.