
ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಐಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ20 ಕ್ರಿಕೆಟ್ ಮಾದರಿಯಲ್ಲಿ ಐಯ್ಯರ್ 4000 ರನ್ ಪೂರ್ಣಗೊಳಿಸಿದ್ದಾರೆ. ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿನ 47 ರನ್‌ನೊಂದಿಗೆ ಐಯ್ಯರ್ ಈ ಸಾಧನೆ ಮಾಡಿದ್ದಾರೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 33ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಿದ್ದವು. ಈ ವೇಳೆ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಶ್ರೇಯಸ್ ಐಯ್ಯರ್ 41 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದರು.
ಇದರೊಂದಿಗೆ ಐಯ್ಯರ್ ಟಿ20 ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿಕೊಂಡರಲ್ಲದೆ ಕಳೆದ ಕೆಲವಾರು ವರ್ಷಗಳಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಐಯ್ಯರ್ 79 ಐಪಿಎಲ್ ಪಂದ್ಯಗಳಲ್ಲಿ 2200 ರನ್, 28 ಟಿ20ಐ ಪಂದ್ಯಗಳಲ್ಲಿ 550 ರನ್ ಗಳಿಸಿದ್ದಾರೆ. ಇದಲ್ಲದೆ ದೇಸಿ ಕ್ರಿಕೆಟ್ ಪಂದ್ಯಗಳನ್ನು ಸೇರಿದರೆ ಟಿ20ಯಲ್ಲಿ ಐಯ್ಯರ್ 4000+ ರನ್ ಬಾರಿಸಿದಂತಾಗುತ್ತದೆ.
ಬುಧವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್‌ಆರ್‌ಎಚ್, ಅಬ್ದುಲ್ ಸಮದ್ 28, ರಶೀದ್ ಖಾನ್ 22 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 134 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಶಿಖರ್ ಧವನ್ 42, ಶ್ರೇಯಸ್ ಐಯ್ಯರ್ 47, ರಿಷಭ್ ಪಂತ್ 35 ರನ್‌ನೊಂದಿಗೆ 17.5 ಓವರ್‌ಗೆ 2 ವಿಕೆಟ್ ಕಳೆದು 139 ರನ್ ಗಳಿಸಿತು.