ವಾರ್ನರ್ ಜೊತೆ ಆತನನ್ನೂ ಹೈದರಾಬಾದ್ ತಂಡದಿಂದ ವಜಾ ಮಾಡಬೇಕಿತ್ತು : ಗವಾಸ್ಕರ್ ಗರಂ

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಸುವ ಆಲೋಚನೆಯಲ್ಲಿದೆ ಬಿಸಿಸಿಐ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಕಳಪೆ ಪ್ರದರ್ಶನ ತೋರಿದ ತಂಡ ಎಂದರೆ ಅದು ಸನ್ ರೈಸರ್ಸ್ ಹೈದರಾಬಾದ್. ಐಪಿಎಲ್ ನಿಲುಗಡೆಯಾಗುವ ವೇಳೆಗೆ 7 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಸೋತು ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಹೈದರಾಬಾದ್ ತಂಡ ಸಾಲುಸಾಲು ಸೋಲನ್ನು ಕಂಡ ಕಾರಣವನ್ನು ನೀಡಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರನ್ನು ನೂತನ ನಾಯಕ ಎಂದು ಘೋಷಣೆ ಮಾಡಲಾಯಿತು. ಅಷ್ಟೇ ಅಲ್ಲದೆ ಮುಂದಿನ ಪಂದ್ಯದಲ್ಲಿ ತಂಡದಲ್ಲೂ ಸ್ಥಾನ ನೀಡದೆ ವಾರ್ನರ್ ಅವರನ್ನು ತಂಡದಿಂದ ಹೊರಗಿಡಲಾಯಿತು. ಹೈದರಾಬಾದ್ ತಂಡ ತೆಗೆದುಕೊಂಡ ಈ ನಿರ್ಧಾರದ ವಿರುದ್ಧ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದು ಇದೀಗ ಸುನಿಲ್ ಗವಾಸ್ಕರ್ ಕೂಡಾ ತಮ್ಮ ಅಭಿಪ್ರಾಯವನ್ನು ಈ ಕೆಳಕಂಡಂತೆ ವ್ಯಕ್ತಪಡಿಸಿದ್ದಾರೆ.

ವಾರ್ನರ್ ಒಬ್ಬ ಅತ್ಯದ್ಭುತ ಬ್ಯಾಟ್ಸ್‌ಮನ್
'ಹೈದರಾಬಾದ್ ವಾರ್ನರ್‌ನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೆ ತಂಡದಿಂದಲೂ ಸಹ ಕೈಬಿಟ್ಟಿದ್ದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ವಾರ್ನರ್ ಒಬ್ಬ ಬ್ಯಾಟ್ಸ್‌ಮನ್ ಆಗಿ ಕಲೆಹಾಕಿದ್ದ ರನ್‌ಗಳು ಅಮೂಲ್ಯವಾದದ್ದು ಮತ್ತು ತಂಡಕ್ಕೆ ಅದು ಸಹಕಾರಿಯಾಗಿತ್ತು. ನಾಯಕತ್ವ ಇಲ್ಲದಿದ್ದರೂ ಓರ್ವ ಆಟಗಾರನನ್ನಾಗಿ ವಾರ್ನರ್‌ನ್ನು ಹೈದರಾಬಾದ್ ತಂಡದಲ್ಲಿಟ್ಟುಕೊಳ್ಳಬೇಕಿತ್ತು' ಎಂದು ಗವಾಸ್ಕರ್ ತಿಳಿಸಿದರು.

ನಾಯಕತ್ವ ಬದಲಾವಣೆಯ ರೀತಿ ಕೋಚ್ ಬದಲಾವಣೆ ಕೂಡ ಮಾಡಬಹುದಿತ್ತು
ಡೇವಿಡ್ ವಾರ್ನರ್ ಕಳಪೆ ನಾಯಕತ್ವದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಸರಿಯಾದ ಪ್ರದರ್ಶನ ನೀಡದೆ ಟೂರ್ನಿಯಲ್ಲಿ ಮುಗ್ಗರಿಸಿತು ಎಂಬ ಕಾರಣಕ್ಕೆ ಅವರನ್ನು ನಾಯಕತ್ವದಿಂದ ಹೊರಗಿಡಲಾಯಿತು, ಇದೇ ರೀತಿ ತಂಡದ ಕಳಪೆ ಪ್ರದರ್ಶನದ ಕಾರಣ ನೀಡಿ ತಂಡದ ಕೋಚ್‌ನ್ನೂ ಕೂಡ ಟೂರ್ನಿ ಮಧ್ಯದಲ್ಲಿ ಬದಲಾಯಿಸಬಹುದಿತ್ತಲ್ವಾ? ಎಂದು ಸುನಿಲ್ ಗವಾಸ್ಕರ್ ಹೈದರಾಬಾದ್ ತಂಡದ ನಿರ್ಧಾರವನ್ನು ಟೀಕಿಸಿದ್ದಾರೆ.

ಫುಟ್‌ಬಾಲ್ ಮಾದರಿ ಕ್ರಿಕೆಟ್‌ಗೂ ಬೇಕು
ಒಂದು ಫುಟ್‌ಬಾಲ್ ತಂಡ ಕಳಪೆ ಪ್ರದರ್ಶನ ನೀಡಿದರೆ ತಂಡದ ಆಟಗಾರರಿಗಿಂತ ತಂಡದ ಮ್ಯಾನೇಜರ್ ಹೆಚ್ಚಿನ ಹೊಣೆಯನ್ನು ಹೊರುತ್ತಾರೆ. ಅದೇ ರೀತಿ ಕ್ರಿಕೆಟ್ ತಂಡವೊಂದು ಕಳಪೆ ಪ್ರದರ್ಶನ ನೀಡಿದಾಗ ಆಟಗಾರರಿಗಿಂತ ಹೆಚ್ಚಿನ ಹೊಣೆಯನ್ನು ಕೋಚ್ ಯಾಕೆ ಹೊರುವುದಿಲ್ಲ? ಎಂದು ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications