
ಐಪಿಎಲ್ ಬಯೋಬಬಲ್‌ನ ಒಳಗೆ ಕೆಲ ಆಟಗಾರರು ಕೊರೊನಾ ವೈರಸ್‌ಗೆ ತುತ್ತಾದ ನಂತರ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟೂರ್ನಿಯಲ್ಲಿ ಭಾಗಿಯಾಗಿರುವ ಆಟಗಾರರು ಹಾಗೂ ಇತರ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯನ್ನು ಗಮನಿಸಿ ಬಿಸಿಸಿಐ ಈ ನಿರ್ಧಾರ ಮಾಡಿತ್ತು. ಈಗ ಭಾರತ ಆಯೋಜನೆ ಮಾಡಲು ನಿರ್ಧಾರವಾಗಿದ್ದ ಟಿ20 ವಿಶ್ವಕಪ್ ಕತೆಯೇನು ಎಂಬುದು ಕೂಡ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಈ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಎಸ್‌ಪಿಎನ್ ಕ್ರಿಕ್ ಇನ್ಫೋದಲ್ಲಿ ಬರೆದ ಅಂಕಣದಲ್ಲಿ ಅವರು ಐಪಿಎಲ್ 2021 ಆವೃತ್ತಿಯನ್ನು ಮುಂದೂಡಿರುವ ಕಾರಣ ಮಾರಕ ಸಾಂಕ್ರಾಮಿಕ ರೋಗದಿಂದಾಗಿ ಆಟದ ಅಸ್ಥಿರತೆಯ ಬಗ್ಗೆ ಜನರಿಗೆ ಅರಿವು ಮೂಡಿದೆ ಎಂದಿದ್ದಾರೆ.
ಇನ್ನು ಐಪಿಎಲ್‌ನ ಮುಂದೂಡಿಕೆ ಟಿ20 ವಿಶ್ವಕಪ್‌ನ ಮುಂದೂಡಿಕೆ ಅಥವಾ ಸ್ಥಳಾಂತರಕ್ಕೂ ಮುನ್ಸೂಚನೆಯನ್ನು ನೀಡಬಹುದು ಎಂದು ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಹೇಳಿದ್ದಾರೆ. "ಕೊರೊನಾ ವೈರಸ್ ಸಾರ್ವಜನಿಕವಾಗಿ ವ್ಯಾಪಕ ಹೆಚ್ಚಳ ಹಾಗೂ ಸಾವು ನೋವಿನ ಕಾರಣದಿಂದಾಗಿ ಹಾಗೂ ಐಪಿಎಲ್‌ನಲ್ಲಿ ಭಾಗಿಯಾದ ಆಟಗಾರರಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿದೆ. ಇದರಿಂದಾಗಿ ಆಟದ ಮೇಲಿನ ಅಸ್ಥಿರತೆಯ ಅರಿವು ಜನರಿಗೆ ಅರ್ಥವಾಗಿದೆ" ಎಂದಿದ್ದಾರೆ ಇಯಾನ್ ಚಾಪೆಲ್.
"ಈ ಭಿಕರ ಪರಿಸ್ಥಿತಿಯಿಂದಾಗಿ ಐಪಿಎಲ್ ಟೂರ್ನಿ ಮುಂದೂಡಿಕೆಯಾಗಿರುವುದು ಮುನ್ಸೂಚನೆಯೊಂದನ್ನು ಕೂಡ ನೀಡುತ್ತದೆ. ಇದು ಭಾರತದಲ್ಲಿ ವರ್ಷಾಂತ್ಯದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್‌ನ ಮುಂದೂಡಿಕೆ ಅಥವಾ ಸ್ಥಳಾಂತರಕ್ಕೆ ಕಾರಣವಾಗಬಹುದು" ಎಂದು ತಮ್ಮ ಅಂಕಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.