ಐಪಿಎಲ್ 2021: ದುಬೈ ತಲುಪಿ ಬೆಂಗಳೂರು ತಂಡ ಸೇರಿಕೊಂಡ ಸ್ಪೋಟಕ ಆಲ್‌ರೌಂಡರ್

ಇದೇ ವರ್ಷದ ಏಪ್ರಿಲ್ 9 ನೇ ತಾರೀಕಿನಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು 29 ಪಂದ್ಯಗಳವರೆಗೆ ಯಾವುದೇ ಅಡಚಣೆಯಿಲ್ಲದೆ ನಡೆಯಿತು. ಆದರೆ ನಂತರದ ದಿನಗಳಲ್ಲಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಎಚ್ಚೆತ್ತ ಬಿಸಿಸಿಐ ತಕ್ಷಣವೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಹೀಗೆ ಮಧ್ಯದಲ್ಲಿಯೇ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು ಇದೇ ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲಾರ್ಧದಲ್ಲಿದ್ದ ತಂಡಗಳಿಗೂ ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯುತ್ತಿರುವ ತಂಡಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದು ಆಟಗಾರರಲ್ಲಿ ಕೆಲವೊಂದಷ್ಟು ಬದಲಾವಣೆಗಳಾಗಿವೆ. ಹೀಗೆ ಐಪಿಎಲ್ ದ್ವಿತೀಯಾರ್ಧ ಘೋಷಣೆಯಾಗುತ್ತಿದ್ದಂತೆಯೇ ಮೊದಲಾರ್ಧದಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳ ಕೆಲ ಆಟಗಾರರು ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಹೇಳಿ ಟೂರ್ನಿಯಿಂದ ಹಿಂದೆ ಸರಿದರು. ಹೀಗಾಗಿ ವಿವಿಧ ಫ್ರಾಂಚೈಸಿಗಳು ತಮ್ಮ ತಂಡಗಳಿಂದ ಹಿಂದೆ ಸರಿದ ಆಟಗಾರರ ಸ್ಥಾನಕ್ಕೆ ಹೊಸ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಹೊಸದಾಗಿ ನಾಲ್ವರು ಆಟಗಾರರನ್ನು ಯುಎಇಯಲ್ಲಿ ಮುಂದುವರಿಯಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೋಸ್ಕರ ಆಯ್ಕೆ ಮಾಡಿಕೊಂಡಿತ್ತು.
ಹೌದು ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲಾರ್ಧದಲ್ಲಿ ಭಾಗವಹಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಕೇನ್ ರಿಚರ್ಡ್ಸನ್, ಆಡಂ ಜಂಪಾ, ಡೇನಿಯಲ್ ಸ್ಯಾಂಡ್ಸ್ ಮತ್ತು ಫಿನ್ ಅಲೆನ್ ಬದಲು ಕ್ರಮವಾಗಿ ಜಾರ್ಜ್ ಗಾರ್ಟನ್, ವನಿಂದು ಹಸರಂಗ, ದುಷ್ಮಂತ ಚಾಮೀರಾ ಮತ್ತು ಟಿಮ್ ಡೇವಿಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದುವರಿಯಲಿರುವ ಐಪಿಎಲ್ ಟೂರ್ನಿಗಾಗಿ ಆಯ್ಕೆ ಮಾಡಿಕೊಂಡಿದೆ.
ಹೀಗೆ ನೂತನವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿರುವ ಪೈಕಿ ಶ್ರೀಲಂಕಾದ ವನಿಂದು ಹಸರಂಗ ಮತ್ತು ದುಷ್ಮಂತ ಚಮೀರ ಇತ್ತೀಚೆಗಷ್ಟೇ ಯುಎಇ ತಲುಪಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದರು. ಇದೀಗ ಸಿಂಗಾಪುರ್ ತಂಡದ ಸ್ಫೋಟಕ ಆಲ್ ರೌಂಡರ್ ಆಟಗಾರ ಟಿಮ್ ಡೇವಿಡ್ ದುಬೈ ತಲುಪಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಸೇರಿಕೊಂಡಿದ್ದಾರೆ.
ಈ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಟಿಮ್ ಡೇವಿಡ್ ಅವರಿಗೆ ಸ್ವಾಗತವನ್ನು ಕೋರಿದೆ. ಮುಂದುವರಿಯಲಿರುವ ಐಪಿಎಲ್ ಟೂರ್ನಿಗೆ ಮೊದಲಾರ್ಧದಲ್ಲಿ ಬೆಂಗಳೂರು ತಂಡದ ಆಟಗಾರನಾಗಿದ್ದ ಫಿನ್ ಅಲೆನ್ ಅಲಭ್ಯನಾದ ಕಾರಣ ಆ ಸ್ಥಾನಕ್ಕೆ ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಲಾಯಿತು. ಸಿಂಗಾಪುರ್ ತಂಡದ ಆಟಗಾರನಾದರೂ ಸಹ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಹವಾ ಸೃಷ್ಟಿಸಿರುವ ಟಿಮ್ ಡೇವಿಡ್ ಐಪಿಎಲ್ ಟೂರ್ನಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಪಡಿಸುವ ಸಲುವಾಗಿ ಟಿಮ್ ಡೇವಿಡ್ ಅವರಿಗೆ ಸ್ಥಾನ ನೀಡಲಾಗಿದೆ ಎಂದು ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಮೈಕ್ ಹೆಸನ್ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications