
ಕಿಂಗ್‌ಸ್ಟನ್: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕಿನ್ನು ಒಂದು ದಿನ ಬಾಕಿಯಿರುವಾಗ ವೇಗದರಸ, ಜಮೈಕಾದ ಉಸೇನ್ ಬೋಲ್ಟ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ಗೆ ಒಂದು ಸವಾಲಿನ ಸಂದೇಶ ರವಾನಿಸಿದ್ದಾರೆ.
ಆರ್‌ಸಿಬಿ ಜೆರ್ಸಿ ಧರಿಸಿ ಪೋಸ್ ನೀಡಿರುವ ಉಸೇನ್ ಬೋಲ್ಟ್, ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಕಾಲೆಳೆದಿದ್ದಾರೆ. ಮೈದಾನದಲ್ಲಿ ಯಾರು ಹೆಚ್ಚು ವೇಗಿ ಅನ್ನೋದನ್ನು ನೋಡೋಣ ಎಂದು ಬೋಲ್ಟ್ ಬರೆದುಕೊಂಡಿದ್ದಾರೆ. ಹಿಂದೊಮ್ಮೆ ಬೋಲ್ಟ್ ತನಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಲಭಿಸಿದ್ದರೆ ಆರ್‌ಸಿಬಿ ಪರ ಆಡಬಯಸುತ್ತೇನೆ ಎಂದಿದ್ದ ಮಾತನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಬೋಲ್ಟ್ ಅವರ ಟ್ವೀಟ್‌ನಲ್ಲಿ, 'ಚಾಲೆಂಜರ್‌ಗಳೆ, ನಾನೀಗಲೂ ವಿಶ್ವದಲ್ಲಿ ಅತಿ ವೇಗದ ಚಿರತೆ ಅನ್ನೋದನ್ನು ನಾನು ನಿಮಗೆ ತಿಳಿಸಬಯಸುತ್ತೇನೆ,' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೊಹ್ಲಿ ಮತ್ತು ಎಬಿಡಿಯನ್ನು ಈ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ವೇಗದ ರನ್, ಬೆಸ್ಟ್ ಫೀಲ್ಡಿಂಗ್‌ಗಾಗಿ ಕೊಹ್ಲಿ ಮತ್ತು ಎಬಿಡಿ ಹೆಸರಾಗಿರುವುದರಿಂದ ಮತ್ತು ಆರ್‌ಸಿಬಿ ಮೇಲಿನ ಪ್ರೀತಿಯಿಂದಾಗಿ ಬೋಲ್ಟ್ ಹೀಗೆ ಟ್ವೀಟ್ ಮಾಡಿದ್ದಾರೆ. ಅಂದ್ಹಾಗೆ ಬೋಲ್ಟ್ ಮಾಡಿದ ಈ ಟ್ವೀಟ್‌ಗೆ ಕೇವಲ 1 ಗಂಟೆಯ ಒಳಗೆ 6000 ಲೈಕ್ಸ್ ಸಿಕ್ಕಿವೆ. ಅಲ್ಲದೆ ಆರ್‌ಸಿಬಿ ಮತ್ತು ಬೋಲ್ಟ್ ಅಭಿಮಾನಿಗಳು ಈ ಟ್ವೀಟನ್ನು 1,410ಕ್ಕೂ ಹೆಚ್ಚು ಸಾರಿ ರೀ ಟ್ವೀಟ್ ಮಾಡಿದ್ದಾರೆ.