ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯ ಸೋತು ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ; ಸೋಲಿಗೆ ಕಾರಣ ತಿಳಿಸಿದ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ನಾಯಕತ್ವದ ಅಂತಿಮ ಪಂದ್ಯದಲ್ಲಿ ಅಂತಿಮ ಹಂತದವರೆಗೂ ಹೋರಾಡಿ ಸೋಲನ್ನು ಅನುಭವಿಸಿದೆ. ಹೌದು, ಪ್ರಸ್ತುತ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ ಹಣಾಹಣಿಯಲ್ಲಿ ಸೋಲುಂಡಿದೆ.
ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೋಚಕ 4 ವಿಕೆಟ್‍ಗಳ ಗೆಲುವನ್ನು ಸಾಧಿಸಿದ. 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಕ್ವಾಲಿಫೈಯರ್ 2ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಕಲೆಹಾಕಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ 4 ಓವರ್ ಮಾಡಿದ ಸುನಿಲ್ ನರೈನ್ ಕೇವಲ 21 ರನ್ ನೀಡಿ 4 ವಿಕೆಟ್ ಪಡೆದರು. ಹೀಗೆ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 138 ರನ್ ಕಲೆಹಾಕುವ ಮೂಲಕ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗೆಲ್ಲಲು 139 ರನ್‌ಗಳ ಗುರಿಯನ್ನು ನೀಡಿತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಶುಬ್ ಮನ್ ಗಿಲ್ 29, ವೆಂಕಟೇಶ್ ಐಯ್ಯರ್ 26, ನಿತೀಶ್ ರಾಣಾ 23 ಮತ್ತು ಸುನಿಲ್ ನರೈನ್ 26 ರನ್ ಬಾರಿಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಕಲೆ ಹಾಕಿ 4 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸಿತು. ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿದ ಸುನಿಲ್ ನರೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ತನ್ನ ಅಂತಿಮ ಐಪಿಎಲ್ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ತನ್ನ ನಾಯಕತ್ವದ ತಂಡ ಸೋತ ಬಳಿಕ ಮಾತನಾಡಿದ್ದು, ಸೋಲಿಗೆ ಕಾರಣವಾದ ಅಂಶಗಳನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಆ 22 ರನ್‌ಗಳ ಓವರ್ ನಮ್ಮ ಗೆಲುವನ್ನು ತಡೆಯಿತು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಡೇನಿಯಲ್ ಕ್ರಿಸ್ಟಿಯನ್ 12ನೇ ಓವರ್ ಬೌಲಿಂಗ್ ಮಾಡಿದರು. ಈ ಒಂದೇ ಒಂದು ಓವರ್‌ನಲ್ಲಿ 22 ರನ್ ನೀಡಿದ ಡೇನಿಯಲ್ ಕ್ರಿಸ್ಟಿಯನ್ ದುಬಾರಿಯಾದರು. ಈ ಓವರ್‌ನಲ್ಲಿ ಸುನಿಲ್ ನರೈನ್ 3 ಸಿಕ್ಸರ್ ಸಿಡಿಸಿದರು ಹಾಗೂ 1 ರನ್ ಕಲೆಹಾಕಿದರು ಮತ್ತು ಡೇನಿಯಲ್ ಕ್ರಿಸ್ಟಿಯನ್ 3 ವೈಡ್ ಎಸೆತಗಳನ್ನು ಹಾಕಿದರು. ಈ ಓವರ್ ಕುರಿತಾಗಿ ಪಂದ್ಯ ಮುಗಿದ ನಂತರ ವಿಶೇಷವಾಗಿ ಮಾತನಾಡಿರುವ ವಿರಾಟ್ ಕೊಹ್ಲಿ, ಇದೊಂದು ಓವರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲ್ಲುವ ಅವಕಾಶವನ್ನು ತಲೆಕೆಳಗಾಗಿ ಮಾಡಿತು ಎಂದಿದ್ದಾರೆ.

ಎದುರಾಳಿ ತಂಡದ ಬೌಲಿಂಗ್ ನಮ್ಮನ್ನು ಕಟ್ಟಿ ಹಾಕಿತು
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ ಬೌಲರ್‌ಗಳು ನಮ್ಮನ್ನು ಕಟ್ಟಿ ಹಾಕಿದರು. ಅದರಲ್ಲಿಯೂ ಸುನಿಲ್ ನರೈನ್ ಓರ್ವ ಅತ್ಯುತ್ತಮ ಗುಣಮಟ್ಟದ ಬೌಲರ್ ಆಗಿದ್ದು ಎಂದಿನಂತೆ ಇಂದಿನ ಪಂದ್ಯದಲ್ಲಿಯೂ ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಶಕೀಬ್ ಅಲ್ ಹಸನ್ ಮತ್ತು ವರುಣ್ ಚಕ್ರವರ್ತಿ ಕೂಡ ನಮ್ಮ ತಂಡದ ಮೇಲೆ ಒತ್ತಡವನ್ನು ಹೇರಿದರು ಮತ್ತು ಬ್ಯಾಟಿಂಗ್‌ನಲ್ಲಿ ನಮ್ಮ ತಂಡಕ್ಕೆ 15 ರನ್‌ಗಳ ಕೊರತೆಯುಂಟಾಯಿತು ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

ಕ್ವಾಲಿಫೈಯರ್ 2 ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರೋಚಕ ಜಯ ಸಾಧಿಸಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಅಕ್ಟೋಬರ್ 13ರ ಬುಧವಾರದಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications