
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ (ಏಪ್ರಿಲ್ 13) ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವೀರೋಚಿತ ಹೋರಾಟದ ಮೂಲಕ ಗೆದ್ದಿತ್ತು. ಕಡಿಮೆ ಟೋಟಲ್ ರನ್ ಗಳಿಸಿದ್ದ ಮುಂಬೈ, ಕೊನೇ ಗಳಿಗೆಯಲ್ಲಿ ಪಂದ್ಯವನ್ನು ತನ್ನತ್ತ ತಿರುಗಿಸಿಕೊಂಡಿತ್ತು.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಮುಂಬೈ ಇಂಡಿಯನ್ಸ್ 20 ಓವರ್‌ಗೆ 10 ವಿಕೆಟ್ ಕಳೆದು 152 ರನ್ ಗಳಿಸಿತ್ತು. ಆದರೆ ಗಳಿಸಿದ್ದ ಸ್ಕೋರ್ ಅನ್ನು ಮುಂಬೈ ಸಮರ್ಥ ರೀತಿಯಲ್ಲಿ ಡಿಫೆಂಡ್ ಮಾಡಿಕೊಂಡಿತ್ತು. ಕೆಕೆಆರ್ 20 ಓವರ್‌ಗೆ 7 ವಿಕೆಟ್ ಕಳೆದು 142 ರನ್ ಬಾರಿಸಿ ಕೇವಲ 10 ರನ್‌ನಿಂದ ಸೋಲೊಪ್ಪಿಕೊಂಡಿತ್ತು.
ಮುಂಬೈ ಇಂಡಿಯನ್ಸ್ ತಂಡದ ವಿರೋಚಿತ ಹೋರಾಟ, ಕೊನೇ ಗಳಿಗೆಯಲ್ಲಿ ಪಂದ್ಯದ ಗತಿಯನ್ನು ಗೆಲುವಿನೆಡೆಗೆ ತಿರುಗಿಸಿಕೊಂಡ ರೀತಿಗೆ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ತಮಾಷೆಯಾಗಿ ಪ್ರತಿಯಿಸಿದ್ದಾರೆ. ಸೆಹ್ವಾಗ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ತಮಾಷೆಯ ಪೋಸ್ಟ್ ಹಾಕಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸೆಹ್ವಾಗ್ ಅವರು WWE ಸೂಪರ್‌ಸ್ಟಾರ್‌ಗಳಾದ ಅಂಡರ್ ಟೇಕರ್ ಮತ್ತು ರ್‍ಯಾಂಡಿ ಆರ್ಟನ್ ನಡುವಿನ ಕ್ಯಾಸ್ಕೆಟ್ ಮ್ಯಾಚ್‌ನ ವಿಡಿಯೋ ಹಾಕಿದ್ದಾರೆ. ಇದರಲ್ಲಿ ಮಲಗಿದ್ದ ಟೇಕರ್ ಸಡನ್ ಆಗಿ ಎದ್ದು ರ್‍ಯಾಂಡಿ ಮೇಲೆ ದಾಳಿ ಮಾಡುವ ಚಿತ್ರಣವಿದೆ. ಪೋಸ್ಟ್ ಜೊತೆಗೆ, 'ಕೆಕೆಆರ್‌ನ ಕೊನೇ 5 ಓವರ್‌ನಲ್ಲಿ ಸತ್ತಿದ್ದ ಮುಂಬೈ ಎದ್ದು ಬಂತು' ಎಂದು ಸಾಲು ಬರೆದುಕೊಂಡಿದ್ದಾರೆ.