
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಸುಮಾರು 1097 ಮಂದಿ ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ವೆಸ್ಟ್ ಇಂಡೀಸ್ (56), ಆಸ್ಟ್ರೇಲಿಯಾ (42) ಹಾಗೂ ದಕ್ಷಿಣ ಆಫ್ರಿಕಾ ( 38) ಆಟಗಾರರಲ್ಲದೆ, ಸಹಭಾಗಿತ್ವ ದೇಶಗಳ 27 ಕ್ರಿಕೆಟರ್ಸ್, 743 ಭಾರತೀಯರು ಸೇರಿದಂತೆ 863 ಅನ್ ಕ್ಯಾಪ್ಡ್ ಕ್ರಿಕೆಟರ್ಸ್ ಹಾಗೂ 68 ವಿದೇಶಿ ಆಟಗಾರರು ಪಟ್ಟಿಯಲ್ಲಿದ್ದಾರೆ.
ಹರಾಜು ಪಟ್ಟಿಯಲ್ಲಿರುವ ಎಸ್ ಶ್ರೀಶಾಂತ್, ಅರ್ಜುನ್ ತೆಂಡೂಲ್ಕರ್ ಅವರ ಜೊತೆಗೆ ಹಿರಿಯ ಆಟಗಾರರೊಬ್ಬರು ಗಮನ ಸೆಳೆಯುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಅವರ ಪುತ್ರ ನಯನ್ ದೋಶಿ ಅವರು ಐಪಿಎಲ್ 2021ರ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
42 ವರ್ಷ ವಯಸ್ಸಿನ ನಾಟಿಂಗ್ ಹ್ಯಾಮ್ ನಲ್ಲಿ ಜನಿಸಿರುವ ಸೌರಾಷ್ಟ್ರ ಪರ ರಣಜಿ ಆಡಿರುವ ನಯನ್ ಅವರು ಐಪಿಎಲ್ ತಂಡ ಸೇರುವ ಉತ್ಸಾಹದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದ ಪ್ರವೀಣ್ ತಾಂಬೆ ಅವರು ಹರಾಜಿಗೆ ಇಲ್ಲದ ಕಾರಣ ನಯನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಈ ಬಗ್ಗೆ ಸ್ಫೋರ್ಟ್ ಕೀಡಾ ಜೊತೆ ಮಾತನಾಡಿದ ನಯನ್, ನಾನು ಸ್ಪಿನ್ನರ್ ಆಗಿ ಐಪಿಎಲ್ ನಲ್ಲಿ ಕಣಕ್ಕಿಳಿಯಲು ಉತ್ಸುಕನಾಗಿದ್ದೇನೆ, ನನ್ನ ತಂದೆ ನಾನು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಕಾಣುವಂತಾಗಬೇಕು ಎಂಬ ಬಯಕೆ ಇದೆ ಎಂದಿದ್ದಾರೆ.
ಡರ್ಬಿಶೈರ್, ಸರೆ ಪರ ಆಡಿರುವ ನಯನ್ ಅವರು ಐಪಿಎಲ್ ತಂಡ ಸೇರುವುದು ಅಷ್ಟು ಸುಲಭದ ಮಾತಲ್ಲ. 1097 ಕ್ರಿಕೆಟರ್ಸ್ ಪಟ್ಟಿ 200-300 ಕ್ರಿಕೆಟರ್ ಪಟ್ಟಿಯಾಗಿ ಕಡಿತಗೊಳ್ಳಲಿದೆ. ಇದರಲ್ಲಿ 50-60 ಮಂದಿ ಅಂತಿಮ ಹಂತದ ಹರಾಜಿಗೆ ಲಭ್ಯರಾಗಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಎಡಗೈ ಸ್ಪಿನ್ನರ್ ಅವರು 52 ಟಿ20 ಪಂದ್ಯಗಳಿಂದ 68 ವಿಕೆಟ್ ಗಳಿಸಿದ್ದಾರೆ.