
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಸಿದ್ಧತೆಗಳನ್ನು ನಡೆಸಿಕೊಂಡಿದೆ. ಏಪ್ರಿಲ್ 9ರಂದು ಆರಂಭಗೊಳ್ಳುವ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಮೇ 30ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.
ಈ ಬಾರಿಯ ಐಪಿಎಲ್ ಟೂರ್ನಿ ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ದೆಹಲಿ ಮತ್ತು ಅಹ್ಮದಾಬಾದ್ ತಾಣಗಳಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಒಟ್ಟು 56 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರು ತಾಣಗಳು ತಲಾ 10 ಲೀಗ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಇನ್ನುಳಿದ ದೆಹಲಿ ಮತ್ತು ಅಹ್ಮದಾಬಾದ್ ತಾಣಗಳು ತಲಾ 8 ಲೀಗ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಈ ಬಾರಿ ಲೀಗ್ ಹಂತದ ಹೆಚ್ಚಿನ ಪಂದ್ಯಗಳು ಆಯಾ ತಂಡಗಳ ತವರು ತಾಣಗಳಲ್ಲಿ ನಡೆಯುತ್ತಿಲ್ಲ. ಇದೊಂದರ್ಥದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ವರದಾನವಾಗಿಯೂ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಹಿನ್ನಡೆಯಾಗಿಯೂ ಪರಿಣಮಿಸಲಿದೆಯೇ?
ಚರ್ಚೆಯೊಂದರ ಪ್ರಕಾರ, ಚೆನ್ನೈ ಮತ್ತು ಬೆಂಗಳೂರು ತಂಡಗಳ ವೇಳಾಪಟ್ಟಿ ಗಮನಿಸಿದರೆ ಪಂದ್ಯ ನಡೆಯುವ ತಾಣಗಳನ್ನು ಪರಿಗಣಿಸಿದರೆ ಎರಡೂ ತಂಡಗಳ ತಾಣಗಳು ವೇಗದ ಬೌಲಿಂಗ್‌ಗೆ ಹೆಚ್ಚು ಅನುಕೂಲಕಾರಿ. ಆದರೆ ಆರ್‌ಸಿಬಿಯಲ್ಲಿ ಉತ್ತಮ ವೇಗಿಗಳಿದ್ದಾರೆ. ಆದರೆ ಚೆನ್ನೈನಲ್ಲಿ ವೇಗಿಗಳಿಗಿಂತ ಸ್ಪಿನ್ನರ್‌ಗಳು ಹೆಚ್ಚಿದ್ದಾರೆ. ಹೀಗಾಗಿ ಲೀಗ್ ಹಂತದ ಕೆಲ ಪಂದ್ಯಗಳಲ್ಲಿ ಬೆಂಗಳೂರಿಗೆ ಹೆಚ್ಚು ಅನುಕೂಲ ಎಂಬ ಮಾತುಗಳು ಕೇಳಿ ಬಂದಿವೆ.