
ಹರ್ಷಲ್ ಪಟೇಲ್
ಕಳೆದ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿ ಪರ್ಪಲ್ ಕ್ಯಾಪ್ ಧರಿಸಿದ್ದ ಹರ್ಶಲ್ ಪಟೇಲ್ ಈ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾಗಿ ಭಾರತದ ತಂಡದ ಪರವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಹರ್ಷಲ್ ಪಟೇಲ್ 8 ಟಿ20 ಪಂದ್ಯಗಳನ್ನಾಡಿದ್ದು 11 ವಿಕೆಟ್ ಸಂಪಾದಿಸಿದ್ದಾರೆ. ಮಧ್ಯಮ ಹಾಗೂ ಡೆತ್ ಓವರ್ ಸ್ಪೆಶಲಿಸ್ಟ್ ಆಗಿ 8.51ರ ಎಕಾನಮಿಯಲ್ಲಿ ಬೌಲೀಂಗ್ ಮಾಡಿದ್ದಾರೆ ಹರ್ಷಲ್ ಪಟೇಲ್.
ಆದರೆ ಟಿ20 ವಿಶ್ವಕಪ್‌ನ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವುದು ಹರ್ಷಲ್ ಪಟೇಲ್‌ಗೆ ಇನ್ನೂ ಸುಲಭವಿಲ್ಲ. ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಜೊತೆಗೆ ದೀಪಕ್ ಚಾಹರ್ ಅಥವಾ ಶಾರ್ದೂಲ್ ಠಾಕೂರ್ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಆಯ್ಕೆಗಾರರ ಮನಗೆಲ್ಲಬೇಕಾದರೆ ಹರ್ಷಲ್ ಪಟೇಲ್ ಮತ್ತೊಂದು ಅದ್ಭುತವಾದ ಐಪಿಎಲ್ ಆವೃತ್ತಿಯನ್ನು ಹೊಂದುವ ಅಗತ್ಯವಿದೆ. ಆರ್‌ಸಿಬಿ 10.75 ಕೋಟಿಗೆ ಹರ್ಷಲ್ ಪಟೇಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಹಾರ್ದಿಕ್ ಪಾಂಡ್ಯ
ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅತ್ಯಂತ ಪ್ರತಿಭಾನ್ವಿತ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಫಿಟ್‌ನೆಸ್ ಸಮಸ್ಯೆ ಹಾರ್ದಿಕ್ ಪಾಂಡ್ಯಗೆ ನಿರಂತರವಾಗಿ ಕಾಡುತ್ತಾ ಬಂದಿದೆ. ಕಳೆದ ಟಿ20 ವಿಶ್ವಕಪ್‌ನ ಬಳಿಕ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಕಾರಣದಿಂದಾಗಿಯೇ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಇದೀಗ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಪಾಂಡ್ಯ ಸಜ್ಜಾಗಿದ್ದಾರೆ. ಬೆನ್ನುನೋವಿನ ಸಮಸ್ಯೆಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿರುವ ವೆಂಕಟೇಶ್ ಐಯ್ಯರ್ ಅತ್ಯುತ್ತಮ ಪ್ರದರ್ಶನ ನೀಡಿ ಸಿಕ್ಕ ಅವಕಾಶದಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ ಮರಳಬೇಕಾದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಲೇಬೇಕಿದೆ. ಈ ಬಾರಿ ನಾಯಕತ್ವದ ಜವಾಬ್ಧಾರಿ ಕೂಡ ಹಾರ್ದಿಕ್ ಹೆಗಲೇರಿರುವ ಕಾರಣ ಈ ಜವಾಬ್ಧಾರಿಯನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ವೆಂಕಟೇಶ್ ಐಯ್ಯರ್
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟಿ20 ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ವೆಂಕಟೇಶ್ ಐಯ್ಯರ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಅದರಲ್ಲೂ ಇತ್ತೀಚೆಗೆ ಭಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವೆಂಕಟೇಶ್ ಐಯ್ಯರ್ ಪ್ರದರ್ಶನ ಅಮೋಘವಾಗಿತ್ತು.
ಇನ್ನು ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತೀಯ ತಂಡಕ್ಕೆ ಮರಳಲು ಯಶಸ್ವಿಯಾದರು ಕೂಡ ವೆಂಕಟೇಶ್ ಅಯ್ಯರ್ ತಮ್ಮ ಉತ್ತಮ ಆಲ್‌ರೌಂಡ್ ಫಾರ್ಮ್ ಅನ್ನು ಮುಂದುವರಿಸಿದರೆ ವೆಂಕಟೇಶ್ ಐಯ್ಯರ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದ ವೆಂಕಟೇಶ್ ಐಯ್ಯರ್ ಅವರನ್ನು ಈ ಬಾರಿಯ ಐಪಿಎಲ್ ಆವೃತ್ತಿಗೆ ಮುನ್ನ ರೀಟೈನ್ ಮಾಡಿಕೊಂಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ವೆಂಕಟೇಶ್ ಐಯ್ಯರ್ ಪ್ರದರ್ಶನ ಸಾಕಷ್ಟು ಕುತೂಹಲ ಮೂಡಿಸಿದೆ.

ಸಂಜು ಸ್ಯಾಮ್ಸನ್
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾಗ ನಾಯಕ ರೋಹಿತ್ ಶರ್ಮಾ ಸಂಜು ಸ್ಯಮ್ಸನ್ ಬಗ್ಗೆ ವಿಶೇಷ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರು. ಅದಕ್ಕೆ ಪೂರಕವಾಗಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 25 ಎಸೆತಗಳಲ್ಲಿ ಭರ್ಜರಿ 39 ರನ್ ಬಾರಿಸಿ ಮಿಂಚಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 18 ರನ್‌ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗೆ ಸಂಜು ಸ್ಯಾಮ್ಸನ್ ತಮ್ಮ ಅಸ್ಥಿರ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದಲ್ಲಿ ನೆಲೆಯೂರಲು ಸಾಧ್ಯವಾಗಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಕೂಡ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದು ಬ್ಯಾಟಿಂಗ್‌ನಲ್ಲಿ ಯಾವ ರೀತಿಯ ಪ್ರದರ್ಶನ ನಿಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಟೂರ್ನಿಯಲ್ಲಿ ಸಂಜು ಬ್ಯಾಟ್‌ನಿಂದ ಸ್ಥಿರ ಪ್ರದರ್ಶನ ಬಂದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಸ್ಪರ್ಧೆಯೊಡ್ಡುವುದು ಖಚಿತ.

ರವಿ ಬಿಷ್ಣೋಯ್
ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತದ ಪರ ಕಣಕ್ಕಿಳಿದಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಗಮನಾರ್ಹ ಪ್ರದರ್ಶನ ನೀಡಿ ಮಿಂಚಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಯುಜುವೇಂದ್ರ ಚಾಹಲ್ ಮೊದಲ ಆಯ್ಕೆಯ ಲೆಗ್ ಸ್ಪಿನ್ನರ್ ಆಗಿದ್ದರೂ ಈ ಬಾರಿಯ ಐಪಿಎಲ್‌ನಲ್ಲಿ ನೀಡುವ ಪ್ರದರ್ಶನ ರವಿ ಬಿಷ್ಣೋಯ್‌ಗೆ ಕೂಡ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಅವಕಾಶ ನೀಡುವ ಸಾಧ್ಯತೆಯಿದೆ. ಹೀಗಾಗಿ ಯುವ ಸ್ಪಿನ್ನರ್ ರವಿ ಬಿಷ್ಣೋಯಗ ಪಾಲಿಗೆ ಕೂಡ ಐಪಿಎಲ್ 2022 ಬಹಳ ಮಹತ್ವದ ಟೂರ್ನಿಯಾಗಿರಲಿದೆ.


Click it and Unblock the Notifications
