RCB: ಉತ್ತಮ ಪ್ರದರ್ಶನ ನೀಡಿ ಗೆಲುವು ತಂದುಕೊಡಬಲ್ಲ ಈ ಮೂವರನ್ನು ಆರ್‌ಸಿಬಿ ಒಮ್ಮೆಯೂ ಕಣಕ್ಕಿಳಿಸಿಲ್ಲ!

ಸದ್ಯ ನಡೆಯುತ್ತಿರುವ ಹದಿನೈದನೇ ಅವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದು, ಮೊದಲ ಪಂದ್ಯದಲ್ಲಿ ಸೋತು ನಂತರ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಬ್ಬರಿಸಿತ್ತು. ಹೀಗೆ ಆರಂಭದಲ್ಲಿ ಅಬ್ಬರಿಸಿ ನಂತರ ನಡೆದ ಪಂದ್ಯಗಳಲ್ಲಿ ಲಯ ಕಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 68 ರನ್‌ಗಳಿಗೆ ಆಲ್ಔಟ್ ಆಗಿ 9 ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತ್ತು.
ಇನ್ನು ಇದಕ್ಕೂ ಹಿಂದಿನ ಎರಡು ಪಂದ್ಯಗಳಲ್ಲಿ ಯಶಸ್ಸು ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಕಡಿಮೆ ಮೊತ್ತ ದಾಖಲಿಸಿದ ತಂಡ ಎಂಬ ಕೆಟ್ಟ ಹೆಸರನ್ನೂ ಸಹ ಪಡೆಯಿತು. ಹೀಗೆ ಉತ್ತಮ ಪ್ರದರ್ಶನ ನೀಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಢೀರ್ ಹೀನಾಯ ಸೋಲನ್ನು ಕಂಡ ನಂತರ ಹಾಗೂ ಈ ಹಿಂದಿನ ಪಂದ್ಯಗಳಲ್ಲಿ ತಂಡ ಕೆಲವೊಂದು ವಿಭಾಗಗಳಲ್ಲಿ ಮುಗ್ಗರಿಸಿದ್ದನ್ನು ಗಮನಿಸಿದ ನಂತರ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಬೇಕಾದ ಅನಿವಾರ್ಯತೆ ಇದ್ದು, ಬೆಂಚ್ ಕಾಯುತ್ತಿರುವ ಕೆಲ ಆಟಗಾರರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಬೇಕಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರು ಬೆಂಚ್ ಕಾಯುತ್ತಿದ್ದು, ಅಂತಹ ಆಟಗಾರರಿಗೆ ಆಡುವ ಬಳಗದಲ್ಲಿ ಅವಕಾಶ ನೀಡುವ ಅಗತ್ಯವಿದೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಡುವ ಬಳಗದಲ್ಲಿ ಸ್ಥಾನ ಸಿಗಲೇಬೇಕಾದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ಓದಿ..

3. ಸಿದ್ಧಾರ್ಥ್ ಕೌಲ್
ಭಾರತ ಅಂಡರ್ 19 ತಂಡದಲ್ಲಿ ವಿರಾಟ್ ಕೊಹ್ಲಿಯ ಸಹ ಆಟಗಾರನಾಗಿದ್ದ ಸಿದ್ಧಾರ್ಥ್ ಕೌಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದು, ಇನ್ನೂ ಕಣಕ್ಕಿಳಿಯುವ ಅವಕಾಶ ಸಿಕ್ಕಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಟ್ಟು 54 ಪಂದ್ಯಗಳನ್ನಾಡಿ 58 ವಿಕೆಟ್‌ಗಳನ್ನು ಪಡೆದಿದ್ದು, ಅನುಭವಿ ಆಟಗಾರನಾಗಿದ್ದಾರೆ. ಇನ್ನು ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯಲು ಪರದಾಡುತ್ತಿರುವ ಸಿದ್ಧಾರ್ಥ್ ಕೌಲ್ ಅವರನ್ನು ಕಣಕ್ಕಿಳಿಸಬೇಕಾಗಿದ್ದು, ವಿಕೆಟ್ ಸಮಸ್ಯೆಗೆ ಈ ಬಲಗೈ ವೇಗಿ ಪರಿಹಾರವಾಗಲಿದ್ದಾರೆ. ಅದರಲ್ಲಿಯೂ ಅಂತಿಮ ಓವರ್‌ಗಳಲ್ಲಿ ಎದುರಾಳಿ ಆಟಗಾರರ ಮೇಲೆ ಒತ್ತಡ ಹೇರಬಲ್ಲಂತಹ ಬೌಲಿಂಗ್ ಮಾಡಬಲ್ಲ ಈತನನ್ನು ಆರ್‌ಸಿಬಿ ಕಣಕ್ಕಿಳಿಸಿದರೆ ತಂಡಕ್ಕೆ ಅನುಕೂಲವಾಗಲಿದೆ.

2. ಜೇಸನ್ ಬೆಹ್ರೆನ್‌ಡಾರ್ಫ್
ಆಸ್ಟ್ರೇಲಿಯಾದ ಎಡಗೈ ವೇಗಿ ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದಾರೆ. ಇನ್ನು ಆರ್‌ಸಿಬಿ ಟೆಸ್ಟ್ ಪಂದ್ಯಗಳ ಸ್ಪೆಷಲಿಸ್ಟ್ ಜೋಶ್ ಹೇಜಲ್‌ವುಡ್ ಅವರನ್ನು ಕಣಕ್ಕಿಳಿಸುತ್ತಿದ್ದು, ಇವರ ಬದಲಾಗಿ ಟಿ ಟ್ವೆಂಟಿ ಕ್ರಿಕೆಟ್ ಬೌಲರ್ ಆದ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಕಣಕ್ಕಿಳಿಸಿದರೆ ಹೆಚ್ಚಿನ ವಿಕೆಟ್ ಪಡೆಯಲಿದ್ದಾರೆ ಎನ್ನಬಹುದು. ಬಿಗ್‌ಬ್ಯಾಷ್ ಲೀಗ್ ಟೂರ್ನಿಯಲ್ಲಿ ಪರ್ಥ್ ಸ್ಕಾರ್ಚರ್ಸ್ ತಂಡದ ಪರ ಹೆಚ್ಚಾಗಿ ಕಣಕ್ಕಿಳಿದಿರುವ ಈ ವೇಗಿ 72 ಪಂದ್ಯಗಳನ್ನಾಡಿ 86 ವಿಕೆಟ್ ಪಡೆದಿದ್ದಾರೆ. ಹೀಗೆ ಪರ್ಥ್ ಸ್ಕಾರ್ಚರ್ಸ್ ತಂಡದ ಗೆಲುವಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಓರ್ವನಾಗಿರುವ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ರಾಯಲ್ ಚಾಲೆಂಜರ್ಸ್ ಕಣಕ್ಕಿಳಿಸಬೇಕಿದೆ.

1. ಮಹಿಪಾಲ್ ಲೊಮ್ರರ್
ರಾಜಸ್ಥಾನ ಮೂಲದ 22 ವರ್ಷದ ಯುವ ಕ್ರಿಕೆಟಿಗ ಮಹಿಪಾಲ್ ಲೊಮ್ರರ್ ರಾಜಸ್ಥಾನ್ ರಾಯಲ್ಸ್ ತಂಡದ ಪರ ಉತ್ತಮ ಪ್ರದರ್ಶನಗಳನ್ನು ನೀಡಿರುವಂತಹ ಆಟಗಾರ. ಇನ್ನು ಲೊಮ್ರರ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದು, ತಂಡ ಈತನನ್ನು ಆಡುವ ಬಳಗಕ್ಕೆ ಕರೆತಂದರೆ ಮಧ್ಯಮ ಕ್ರಮಾಂಕದಲ್ಲಿ ರನ್ ಹೊಳೆ ಹರಿಸಿ ಅಬ್ಬರಿಸುವುದು ಖಚಿತ. ಎಡಗೈ ಸ್ಪಿನ್ನರ್ ಕೂಡ ಆಗಿರುವ ಮಹಿಪಾಲ್ ಲೊಮ್ರರ್ ಮಧ್ಯಮ ಓವರ್‌ಗಳಲ್ಲಿ ಎದುರಾಳಿ ತಂಡದ ಪ್ರಮುಖ ವಿಕೆಟ್ ಕಬಳಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮಹಿಪಾಲ್ ಲೊಮ್ರರ್ 181 ರನ್ ಕಲೆಹಾಕಿದ್ದು ಇನ್ನಿಂಗ್ಸ್‌ವೊಂದರಲ್ಲಿ 47 ರನ್ ಚಚ್ಚಿ ಅಬ್ಬರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications