IPL 2022: ಈ ಮೂವರಿಗೆ ಆಡುವ ಅವಕಾಶ ನೀಡಿದ್ದರೆ ಮುಂಬೈ ಸತತ 8 ಸೋಲು ಕಾಣುತ್ತಾ ಇರಲಿಲ್ಲ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂಬೈ ಇಂಡಿಯನ್ಸ್ ಪಾಲಿಗೆ ಅಕ್ಷರಶಃ ಅತಿ ಕೆಟ್ಟ ಟೂರ್ನಿಯಾಗಿ ಪರಿಣಮಿಸಿದೆ. ಟೂರ್ನಿಯಲ್ಲಿ ಎಲ್ಲವೂ ಮುಂಬೈ ಇಂಡಿಯನ್ಸ್ ಯೋಜನೆಗೆ ವಿರುದ್ಧವಾಗಿಯೇ ನಡೆಯುತ್ತಿದ್ದು, ತಂಡ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಒಟ್ಟು 8 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ 8 ಪಂದ್ಯಗಳನ್ನು ಸೋತ ತಂಡ ಎಂಬ ಕೆಟ್ಟ ದಾಖಲೆಯನ್ನು ಬರೆದಿದೆ.
ಹೌದು, 5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಅತಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿರುವ ತಂಡ ಎಂಬ ಖ್ಯಾತಿಯನ್ನು ಪಡೆದಿದ್ದ ಮುಂಬೈ ಇಂಡಿಯನ್ಸ್ ಇದೀಗ ಕೆಟ್ಟ ದಾಖಲೆಯನ್ನು ಬರೆದು ಟೀಕಾಕಾರರಿಗೆ ಆಹಾರವಾಗಿದೆ. ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರ ಬಿದ್ದಿದ್ದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಸಹ ಲೀಗ್ ಹಂತದಲ್ಲಿಯೇ ಹೊರಬೀಳಲಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರು ಕೆಟ್ಟ ಫಾರ್ಮ್‌ನಿಂದ ನೆಲಕಚ್ಚಿದ್ದು ಬ್ಯಾಟಿಂಗ್ ವಿಭಾಗದಲ್ಲಿ ಸೂರ್ಯಕುಮಾರ್ ಯಾದವ್ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದು ಉಳಿದೆಲ್ಲಾ ಆಟಗಾರರು ಮಕಾಡೆ ಮಲಗಿದ್ದಾರೆ. ಅತ್ತ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಉತ್ತಮ ಪ್ರದರ್ಶನ ನೀಡಲಾಗದೇ ವಿಫಲರಾಗಿದ್ದು ಈ ಬಾರಿ ಬೌಲಿಂಗ್ ವಿಭಾಗ ಕೂಡಾ ಕೆಟ್ಟ ಪ್ರದರ್ಶನವನ್ನು ನೀಡಿದೆ. ಹೀಗೆ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳೂ ವಿಫಲವಾದ ಕಾರಣ ಮುಂಬೈ ಇಂಡಿಯನ್ಸ್ ಸತತ 8 ಪಂದ್ಯಗಳಲ್ಲಿ ಸೋತು ಗೆಲುವಿನ ಖಾತೆ ತೆರೆಯಲಾಗದೇ ನೆಲಕಚ್ಚಿದೆ. ಇನ್ನು ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡಬಲ್ಲ ಈ ಕೆಳಕಂಡ ಮೂವರು ಆಟಗಾರರಿಗೆ ಆಡುವ ಅವಕಾಶವನ್ನು ನೀಡದೇ ಕೈ ಸುಟ್ಟುಕೊಂಡಿದೆ.

1. ಟಿಮ್ ಡೇವಿಡ್
ಸಿಂಗಾಪುರದ ಆಲ್ ರೌಂಡರ್ ಆಟಗಾರ ಟಿಮ್ ಡೇವಿಡ್ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಸಾಮರ್ಥ್ಯವಿರುವ ಆಟಗಾರನಾಗಿದ್ದಾರೆ. ಇಲ್ಲಿಯವರೆಗೂ ತಾನು ಪ್ರತಿನಿಧಿಸಿರುವ ಹಲವಾರು ತಂಡಗಳ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿರುವ ಟೀಮ್ ಡೇವಿಡ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 8.25 ಕೋಟಿಗೆ ಮುಂಬೈ ಇಂಡಿಯನ್ಸ್ ಸೇರಿದ್ದು 2 ಪಂದ್ಯಗಳಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಟಿಮ್ ಡೇವಿಡ್ ಅವರಿಗೆ ನಂತರದ ಪಂದ್ಯಗಳಲ್ಲಿ ಅವಕಾಶವನ್ನು ನೀಡಿಲ್ಲ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವಿರುವ ಟಿಮ್ ಡೇವಿಡ್ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 9 ಅರ್ಧಶತಕ ಹಾಗೂ ಹಲವಾರು ವಿಕೆಟ್‍ಗಳನ್ನು ಪಡೆದಿದ್ದಾರೆ. ಹೀಗೆ ಅನೇಕ ಬಾರಿ ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ಟಿಮ್ ಡೇವಿಡ್ ಅವರನ್ನು ಕೇವಲ 2 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ತಂಡದಿಂದ ಹೊರಗಿಟ್ಟ ಮುಂಬೈ ಇಂಡಿಯನ್ಸ್ ಕೈ ಸುಟ್ಟುಕೊಂಡಿದೆ. ಈ ಬಲಿಷ್ಠ ಆಟಗಾರನ ಸಾಮರ್ಥ್ಯವನ್ನು 2 ಪಂದ್ಯಗಳಲ್ಲಿ ಅಳೆಯುವುದರ ಬದಲು ಮತ್ತೊಂದು ಅವಕಾಶ ನೀಡಬೇಕಾಗಿತ್ತು.

2. ಮಯಾಂಕ್ ಮಾರ್ಕಂಡೆ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ 8 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಮ್ಮ ತಂಡದ ಪ್ರಮುಖ ಆಟಗಾರ ಮಯಾಂಕ್ ಮಾರ್ಕಂಡೆ ಅವರಿಗೆ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ಕಣಕ್ಕಿಳಿಯುವ ಅವಕಾಶವನ್ನು ನೀಡಿಲ್ಲ. 2018ರ ಐಪಿಎಲ್ ಟೂರ್ನಿಯಲ್ಲಿಯೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಮಯಾಂಕ್ ಮಾರ್ಕಂಡೆ ಆ ಆವೃತ್ತಿಯಲ್ಲಿ 15 ವಿಕೆಟ್ ಪಡೆದು ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಟ್ಟಾರೆ 18 ಪಂದ್ಯಗಳನ್ನಾಡಿ 16 ವಿಕೆಟ್ ಪಡೆದಿರುವ ಮಯಾಂಕ್ ಮಾರ್ಕಂಡೆಗೆ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯುವ ಅವಕಾಶವನ್ನು ನೀಡದೇ ಕೈ ಸುಟ್ಟುಕೊಂಡಿದೆ.

3. ಆರ್ಯನ್ ಜುಯಲ್
ಅಂಡರ್ 19 ಕೆಟಗರಿ ಅಡಿಯಲ್ಲಿ ಉತ್ತರಪ್ರದೇಶ ಹಾಗೂ ಲಿಸ್ಟ್ ಎ ಪರ ಉತ್ತಮ ಪ್ರದರ್ಶನ ನೀಡಿರುವ ಆರ್ಯನ್ ಜುಯಲ್ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವಿರುವ ಆಟಗಾರನಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 371 ರನ್ ಹಾಗೂ ಲಿಸ್ಟ್ ಎ ಪಂದ್ಯಗಳಲ್ಲಿ 532 ರನ್ ಕಲೆ ಹಾಕಿರುವ ಆರ್ಯನ್ ಜುಯಲ್ ಎರಡೂ ಮಾದರಿಗಳಲ್ಲಿಯೂ ತಲಾ 1 ಶತಕ ಹಾಗೂ 3 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವಿರುವ ಆರ್ಯನ್ ಜುಯಲ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ಮುಂಬೈ ಇಂಡಿಯನ್ಸ್ ಕೈಸುಟ್ಟುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications